ಶೈಕ್ಷಣಿಕ ವ್ಯವಸ್ಥೆಗೆ ಬೇಕಿದೆ ಹೊಸತನ

ctd--002.
Published on

ಚಿತ್ರದುರ್ಗ: ಗುಮಾಸ್ತರನ್ನು ಸೃಷ್ಟಿಸುವ ಶಿಕ್ಷಣ ವ್ಯವಸ್ಥೆ ಬದಲು ಶೈಕ್ಷಣಿಕ ವ್ಯವಸ್ಥೆಗೆ ಹೊಸತನ ಬರಬೇಕಿದೆ ಎಂದು ಹಿರಿಯ ನಟ ಎಚ್.ಜಿ. ದತ್ತಾತ್ರೇಯ(ದತ್ತಣ್ಣ)ಅಭಿಪ್ರಾಯಪಟ್ಟರು.

ಭಾನುವಾರ ನಗರದ ಜ್ಞಾನಭಾರತಿ ವಿದ್ಯಾಮಂದಿರದ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ನಳಂದಾ ವಿಶ್ವವಿದ್ಯಾನಿಲಯಕ್ಕೆ ದೇಶ, ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು ಎನ್ನುವುದನ್ನೇ ಮರೆತಿದ್ದೇವೆ. ಬ್ರಿಟಿಷ್ ಗುಲಾಮಿತನದಿಂದ ಬಿಡುಗಡೆಯಾಗಿದ್ದರೂ, ಗುಮಾಸ್ತರನ್ನು ತಯಾರಿಸುವ ಈ ಶಿಕ್ಷಣಕ್ಕಿಂತ ಜ್ಞಾನ, ಕೌಶಲ ಹಾಗೂ ಆತ್ಮವಿಶ್ವಾಸ ವೃದ್ಧಿಸುವಂಥ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.

ಶಿಕ್ಷಣದಲ್ಲಿ ಬದಲಾವಣೆ ತರುವ ದಿಸೆಯಲ್ಲಿದ್ದೇವೆ. ಇದಕ್ಕೆ ಪೂರಕವಾಗಿ ಹೊಸ ಶಿಕ್ಷಣ ನೀತಿ(ಎನ್‌ಇಪಿ)ಬಂದಿದೆ. ಆದರೆ, ರಾಜ್ಯ ಸರ್ಕಾರ, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಹೇಳುತ್ತಿದೆ. ಇವರಡರ ನಡುವೆ ವಿದ್ಯಾರ್ಥಿಗಳ ಕಥೆ ಏನಾಗಬೇಕು ಎಂದು ಪ್ರಶ್ನಿಸಿದರು.

ಒಳ್ಳೆಯ ಕೆಲಸ ಮಾಡಿದ ಶ್ರೇಷ್ಠರನ್ನು ಸ್ಮರಿಸುವುದೇ ನಿಜವಾದ ನಮ್ಮ ಬೆಳವಣಿಗೆ. ಸಮಾಜದಿಂದ ಸಾಕಷ್ಟು ಪಡೆದಿರುವ ನಾವು ಸಮಾಜದ ಋಣ ತೀರಿಸುವ ಕೆಲಸವಾಗಬೇಕಿದೆ. ಚಿತ್ರದುರ್ಗ ಬರೀ ಒಂದು ಊರಲ್ಲ. ಇದೊಂದು ಶಕ್ತಿ. ನಾವೆಲ್ಲರೂ ಮದಕರಿ ನಾಯಕರ ವಂಶಸ್ಥರು. ತರಾಸು, ಹುಲ್ಲೂರು ಶ್ರೀನಿವಾಸ ಜೋಯಿಸರಂತಹ ಹಲವು ಅದ್ಭುತ ಬರಹಗಾರರು, ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಜನಿಸಿದ ಊರಿದು ಎಂದು ಶಾಲಾ ದಿನಗಳನ್ನು ಸ್ಮರಿಸಿದರು.

ರಾಷ್ಟ್ರೋತ್ಥಾನ ಪರಿಷತ್ ರಾಜ್ಯ ಪಠ್ಯಕ್ರಮ ವಿಭಾಗದ ಸಂಚಾಲಕ ಬಸವನಗೌಡ ಮಾತನಾಡಿ, ಶಾಲೆ ಸಮಾಜದ ಪರಿವರ್ತನಾ ಕೇಂದ್ರ ಆಗಬೇಕು. ಸಮಾಜದಿಂದ ಪಡೆದ ವಿದ್ಯೆಯನ್ನು ಸಮಾಜಕ್ಕೆ ಧಾರೆ ಎರೆಯಬೇಕು ಎಂದರು.

ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದ ಕಾರ್ಯದರ್ಶಿ ನಿರ್ಮಲ್ ಕುಮಾರ್ ಮಾತನಾಡಿ, ಮಕ್ಕಳು ತಂದೆ, ತಾಯಿ, ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ನಿಮ್ಮ ಬೆಳವಣಿಗೆಯಲ್ಲಿ ಅವರ ಪಾತ್ರ ಬಹಳ ದೊಡ್ಡದು ಎಂದರು.

ಜ್ಞಾನಭಾರತಿ ವಿದ್ಯಾಮಂದಿರದ ಕಾರ್ಯದರ್ಶಿ ಡಾ.ಕೆ. ರಾಜೀವಲೋಚನ ಮಾತನಾಡಿ, ಮಕ್ಕಳಲ್ಲಿ ಶಿಸ್ತು, ದೇಶಭಕ್ತಿ ಕಲಿಸುವ ಶಾಲೆ ಆರಂಭಿಸಬೇಕೆಂಬ ಉದ್ದೇಶದಿಂದ ಆರೆಸ್ಸೆಸ್‌ನ ಹಿರಿಯರು 1973ರಲ್ಲಿ ಆರಂಭಿಸಿದ ಈ ಶಾಲೆ ಈಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.

ಆಡಳಿತ ಮಂಡಳಿ ಸದಸ್ಯ ಓಂಕಾರಪ್ಪ, ಹಿಂದಿನ ಅಧ್ಯಕ್ಷ ಶ್ರೀರಂಗಪ್ಪ, ಪ್ರಾಚಾರ‌್ಯ ಪ್ರಜ್ವಲ್ ಇದ್ದರು. ಎಂಎಲ್‌ಸಿ ಕೆ.ಎಸ್. ನವೀನ್, ಕುಡಾ ಮಾಜಿ ಅಧ್ಯಕ್ಷ ಟಿ. ಬದರಿನಾಥ್ ಮತ್ತಿತರ ಶಾಲೆಯ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 40 ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net