ಶೈಕ್ಷಣಿಕ ವಲಯಕ್ಕೆ ಡಿಜಿಟಲ್ ಕೊಡುಗೆ

111111
Published on

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಮೋದಿ ಅವರ ಕನಸಿನ ಕೂಸಾದ ಆತ್ಮನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿ ಆನ್‌ಲೈನ್ ಇನ್‌ಸ್ಟ್ರುಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲೇ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಸಂಸದ ಡಾ.ಸುಧಾಕರ್ ಹೇಳಿದರು.
ತ್ಯಾಮಗೊಂಡ್ಲು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿರುವ ಆನ್‌ಲೈನ್ ಇನ್‌ಸ್ಟ್ರುಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಟಿ ಉದ್ಯಮದ ರಾಜಧಾನಿಯಾದ ಬೆಂಗಳೂರಿಗೆ ಸಮೀಪದಲ್ಲೇ ಯಾವ ಅಂತಾರಾಷ್ಟ್ರೀಯ ಉದ್ಯಮಕ್ಕೂ ಕಡಿಮೆ ಇಲ್ಲದಂತೆ ಗ್ಲೋಬಲ್ ಕಂಪನಿಗೆ ಸರಿಸಮನಾಗಿ ಸಂಪೂರ್ಣ ಯಾಂತ್ರೀಕೃತವಾಗಿ ಡಿಸ್‌ಪ್ಲೇ ಉಪಕರಣ ತಯಾರು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಇದರಿಂದ ಶೈಕ್ಷಣಿಕ ವಲಯಕ್ಕೆ ಮುಂದುವರಿದ ಡಿಜಿಟಲ್ ತಂತ್ರಜ್ಞಾನ ಕೊಡುಗೆ ನೀಡಿದಂತಾಗಿದೆ, ಖಾಸಗಿ
ಶಾಲೆಗಳಲ್ಲದೆ, ಸರ್ಕಾರಿ ಶಾಲೆಗಳಲ್ಲೂ ಈ ಸೌಲಭ್ಯ ಸಿಗುವಂತಾಗಬೇಕು ಎಂದು ಹೇಳಿದರು.

ರಾಜ್ಯದ ಗರಿಮೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಮಂಜುನಾಥ್ ಮಾತನಾಡಿ, ಜರ್ಮನಿ, ಚೀನಾ ಅಥವಾ ಅಮೆರಿಕ ದೇಶಗಳಲ್ಲಿ ಕಾಣುತ್ತಿದ್ದ ತಾಂತ್ರಿಕತೆಯ ದೃಶ್ಯ ಈಗ ನಮ್ಮ ದೇಶದಲ್ಲೂ ಕಾಣುತ್ತಿರುವುದು
ಸಂತೋಷದ ವಿಷಯ ಎಂದರು. ಅಸಾಮಾನ್ಯ ಕೆಲಸ ಸಾಧ್ಯವಾಗುವುದು ಸಾಮಾನ್ಯರಿಂದಲೇ ಎನ್ನುವ ನಾಣ್ನುಡಿಯಂತೆ ಇಂದು ಈ ಕಂಪನಿ ಪ್ರಾರಂಭವಾಗಿದ್ದು, ರಾಜ್ಯದ ಗರಿಮೆ ಹೆಚ್ಚಿಸಿದೆ ಎಂದರು.


ದೇಶದ ಉತ್ಪಾದನೆಗೆ ನೋ ಟ್ಯಾಕ್ಸ್: ಸಾಮಾನ್ಯ ರೈತ ಕುಟುಂಬದಿಂದ ಬಂದು ಬೆಂಗಳೂರಿನಂಥ ಮಹಾನಗರ ಸಮೀಪ ಧೈರ್ಯ ಮಾಡಿ, ದೊಡ್ಡ ಕಂಪನಿ ಪ್ರಾರಂಭ ಮಾಡಿರುವುದು ನಮ್ಮ ಜಿಲ್ಲೆಯವರೇ ಎಂಬುದು ಹೆಮ್ಮೆಯ ವಿಷಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ವಿದೇಶದಿಂದ ತೆರಿಗೆ ರಹಿತವಾಗಿ ತರಿಸುವ ಉತ್ಪನ್ನಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸಿದರೆ ಅದಕ್ಕೂ ತೆರಿಗೆ ರಹಿತ ಮಾಡುವಂತೆ ಪ್ರಧಾನಿ ಅವರಲ್ಲಿ ಪ್ರಸ್ತಾವನೆ ಸಲ್ಲಿಸಲು ಚಿಂತಿಸಲಾಗಿದೆ. ಇದರಿಂದ ಸ್ವದೇಶಿ ಉತ್ಪಾದಕರಿಗೆ ಸಹಾಯವಾಗಲಿದೆ, ಜತೆಗೆ ರೈತರಿಗೂ ಅನುಕೂಲವಾಗುವ ಅವಿಷ್ಕಾರಗಳನ್ನು ಮಾಡಲು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಮಹತ್ವದ ಮೈಲಿಗಲ್ಲು: ಈ ಹೊಸ ಉತ್ಪಾದನಾ ಘಟಕ ಮಹತ್ವದ ಮೈಲಿಗಲ್ಲಾಗಿದೆ. ಈ ಘಟಕ ಜಾಗತಿಕಮಟ್ಟದ ಇಂಟರ್ ಆಕ್ಟಿವ್ ಫ್ಲಾಟ್ ಪ್ಯಾನೆಲ್ ಡಿಸ್ ಪ್ಲೇಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಅನುವು ಮಾಡಿಕೊಡುತ್ತದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಮಹೇಶ್ ಬೆಲ್ಲದ್ ಹೇಳಿದರು. ಜತೆಗೆ, ಭಾರತದ ತಾಂತ್ರಿಕ ಸ್ವಾವಲಂಬನೆ ಜಾಸ್ತಿ ಮಾಡುವ ಮತ್ತು ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸುವ ಗುರಿ ಹೊಂದಿದೆ. ನೇರ ನೇಮಕಾತಿಯಲ್ಲಿ 250 ಉದ್ಯೋಗ ಸೃಷ್ಟಿಯಾದರೆ, ಪರೋಕ್ಷವಾಗಿ 500 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು. ನಮ್ಮ ಕಂಪನಿಗೆ ಮತ್ತು ದೇಶಕ್ಕೆ ಇದು ಅತ್ಯಂತ ಮಹತ್ವದ ಕ್ಷಣವಾಗಿದೆ. ಈ ಉತ್ಪಾದನಾ ಘಟಕದಲ್ಲಿ ನಾವು ಉತ್ಪನ್ನ ತಯಾರಿಸುವುದು ಮಾತ್ರವಲ್ಲದೆ ಭಾರತದ ತಾಂತ್ರಿಕ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತಿದ್ದೇವೆ ಎಂದು ಸಂಸ್ಥೆಯ ಸಿಇಒ ಶಿವಾನಂದ್ ಮಹಾಶೆಟ್ಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net