

ಚಿತ್ರದುರ್ಗ: ದಲಿತರಲ್ಲಿ ಒಗ್ಗಟ್ಟಿಲ್ಲದಂತಾಗಿದೆ. ಒಬ್ಬರ ಬೆಳವಣಿಗೆ ಸಹಿಸದಿರುವುದು ಸೂಕ್ತವಲ್ಲ. ಶೈಕ್ಷಣಿಕ, ರಾಜಕೀಯವಾಗಿ ದಲಿತರು ಬಲಗೊಂಡು ಉನ್ನತ ಸ್ಥಾನಕ್ಕೇರಬೇಕು ಎಂದು ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ ಸಲಹೆ ನೀಡಿದರು.
ರಾಜ್ಯ ಮಾದಿಗ ಯುವಸೇನೆ, ದಲಿತ ಸಂಘರ್ಷ ಸಮಿತಿ, ಕಣಿವೆ ಮಾರಮ್ಮ ಸಂಘ, ಸ್ಲಂ ಜನಾಂದೋಲನ-ಕರ್ನಾಟಕದಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಪತ್ರಿಕಾ ಭವನದಲ್ಲಿ ನಡೆದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದಲಿತರ ಮೇಲೆ ಎಲ್ಲಿಯಾದರೂ ದೌರ್ಜನ್ಯ, ದಬ್ಬಾಳಿಕೆ ನಡೆದರೆ ಸಮುದಾಯದವರು ಹೋರಾಟಕ್ಕೆ ಮುಂದಾಗಬೇಕು. ಎಸ್ಸಿ-ಎಸ್ಟಿ ಬಹುಸಂಖ್ಯಾತರಿದ್ದರೂ ಕಡಿಮೆ ಜನಸಂಖ್ಯೆಯುಳ್ಳವರಿಗೆ ಅಧಿಕಾರ ಕೊಟ್ಟು ಕೈಕಟ್ಟಿ ನಿಲ್ಲುವಂತಾಗಿದೆ. ಇನ್ನಾದರೂ ಎಚ್ಚರಗೊಳ್ಳಿ ಎಂದು ಕಿವಿಮಾತು ಹೇಳಿದರು.
ಮಾದಿಗ ಮಹಾಸಭಾ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಅಂಬೇಡ್ಕರ್ ಆದರ್ಶ, ತತ್ವ, ಸಿದ್ಧಾಂತ ಎಲ್ಲರೂ ಪಾಲಿಸಿದರೆ, ದೇಶದ ಚಿತ್ರಣವೇ ಬದಲಾಗಲಿದೆ ಎಂದರು.
ಇದೇ ವೇಳೆ ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಪ್ಯಾರೆಜಾನ್‌ಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿವಿಧ ಸಂಘಟನೆಗಳ ಮುಖಂಡರಾದ ಬಿ.ರಾಜಣ್ಣ, ಮಹಾಂತೇಶ್, ಸಂಪತ್‌ಕುಮಾರ್, ಓ.ಶಂಕರ್, ತಿಪ್ಪೇಸ್ವಾಮಿ, ಮಲ್ಲಣ್ಣ, ಮಂಜಣ್ಣ, ಕೆ.ರಾಜಣ್ಣ ಇತರರಿದ್ದರು.