ಶೈಕ್ಷಣಿಕ ಪ್ರಗತಿಗೆ ಸ್ಮಾರ್ಟ್ ಕ್ಲಾಸ್ ವರದಾನ, ಪ್ರಾಯೋಗಿಕ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಭಿಮತ

12
Published on

ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲೆಯ 17 ಹೋಬಳಿಗಳ ಸರ್ಕಾರಿ ಶಾಲೆಗಳಲ್ಲಿ ಬೋಧನಾ ಸಾಮರ್ಥ್ಯ ಹೆಚ್ಚಿಸಲು ಸ್ಮಾರ್ಟ್ ಪ್ಯಾನಲ್ ಟಿವಿ ಅಳವಡಿಸಲಾಗಿದೆ. ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವರದಾನವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.

ದೇವನಹಳ್ಳಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಸ್ಮಾರ್ಟ್ ಪ್ಯಾನಲ್ ಟಿವಿ ಮೂಲಕ ಬೋಧನಾ ಪ್ರಾಯೋಗಿಕ ಕಾರ್ಯಕ್ರಮದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡುವ ಉದ್ದೇಶದಿಂದ ಈ ಪ್ರಯೋಗ ಮಾಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಮೂಲಕ ರಾಜ್ಯದ ಜನತೆಗೆ ಈ ಕಾರ್ಯಕ್ರಮ ಪರಿಚಯಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲೂ ಸ್ಮಾರ್ಟ್ ಪ್ಯಾನಲ್ ಟಿವಿ ಬಳಸುವಂತಾಗಬೇಕು ಹಾಗೂ ಖುದ್ದು ವಿದ್ಯಾರ್ಥಿಗಳೇ ಇದನ್ನು ಆಪರೇಟ್ ಮಾಡಲು ಕಲಿಯುವ ಮೂಲಕ ಪಠ್ಯಕ್ಕೆ ಪೂರಕವಾದ ಅಗತ್ಯ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ಈ ವ್ಯವಸ್ಥೆ ಪರಿಚಯಿಸಲಾಗುತ್ತಿದೆ ಎಂದರು.

ಒಟ್ಟಿಗೆ ಶೇರ್ ಮಾಡಬಹುದು: ಟಿವಿ ಮಾನಿಟರ್ ಮೂಲಕ ಒಂದೇ ಬಾರಿಗೆ 20 ವಿದ್ಯಾರ್ಥಿಗಳು ಒಟ್ಟಿಗೆ ಬರೆದು ಶೇರ್ ಮಾಡುವ ಸಾಮರ್ಥ್ಯವಿದೆ. ಅಲ್ಲದೆ, ಜಿಲ್ಲೆಯಲ್ಲಿರುವ ನುರಿತ ಹಾಗೂ ಸಂಪನ್ಮೂಲ ಶಿಕ್ಷಕರ ಬೋಧನೆಯನ್ನು ಒಮ್ಮೆಗೆ 17 ಶಾಲೆಯ ಮಕ್ಕಳು ಕೇಳಲು ಅವಕಾಶವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.

ಈ ಟಿವಿ 5 ವರ್ಷ ಖಾತರಿ ಹೊಂದಿದ್ದು, ಇದರೊಂದಿಗೆ ನೆಟ್‌ವರ್ಕ್‌ಗಾಗಿ ಅನ್‌ಲಿಮಿಟೆಡ್ ಡಾಟಾಪ್ಲಾನ್ ನೀಡಲಾಗಿದೆ. ತರಗತಿಗಳು ಪ್ರತಿ ವಾರವು ನಿರಂತರವಾಗಿ ನಡೆಯಲಿದ್ದು, ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ, ಇದರಿಂದಾಗಿ ಪ್ರತಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಮಕ್ಕಳೊಂದಿಗೆ ಡಿಸಿ ಸಹಭೋಜನ: ವಿಡಿಯೋ ಸಂವಾದದ ಬಳಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕುಳಿತು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಬಿಸಿಯೂಟ ಸವಿದರು. ಈ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸಿ ಬಿಸಿಯೂಟದ ಗುಣಮಟ್ಟ, ಶೈಕ್ಷಣಿಕ ಪ್ರಗತಿಯ ಮಾಹಿತಿ ಪಡೆದರು. ಜಿಲ್ಲಾಮಟ್ಟದ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಊಟ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net