

ಕುಶಾಲನಗರ : ಕೊಡಗು ವಿಶ್ವವಿದ್ಯಾಲಯ ಮತ್ತು ಧಾರವಾಡದ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರದ ನಡುವೆ ಮಾಡಿಕೊಂಡ ಶೈಕ್ಷಣಿಕ ಜಂಟಿ ಒಡಂಬಡಿಕೆಗೆ ಎರಡೂ ಸಂಸ್ಥೆ ಪ್ರಮುಖರು ಸಹಿ ಹಾಕಿದರು.
ಪ್ರಸ್ತುತ ಈ ಒಡಂಬಡಿಕೆಯು ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿರುವ ಧಾರವಾಡದ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ ಹಾಗೂ ಕೊಡಗು ವಿವಿ ಮೂರು ವರ್ಷ ಜಂಟಿಯಾಗಿ ವಿಭಿನ್ನ ಚಟುವಟಿಕೆ ಆಯೋಜಿಸುವ ಉದ್ದೇಶ ಹೊಂದಿದೆ.
ಈ ಎರಡೂ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರಿಗೆ ತರಬೇತಿಗಳನ್ನು ಹಮ್ಮಿಕೊಳ್ಳುವುದು, ಅವರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಏರ್ಪಡಿಸುವುದು, ವಿವಿಧ ರೀತಿಯ ಕಾರ್ಯಾಗಾರ, ವಿಚಾರಸಂಕಿರಣ, ಸಮ್ಮೇಳನಗಳನ್ನು ಹಮ್ಮಿಕೊಂಡು ನೀತಿ ನಿಯಮಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಚರ್ಚಿಸುವುದು, ಜಂಟಿಯಾಗಿ ಸಂಶೋಧನಾ ಯೋಜನೆಗಳನ್ನು ತಯಾರಿಸುವುದು, ವಿದ್ಯಾರ್ಥಿಗಳಿಗೆ ಪರಸ್ಪರ ಯೋಜನಾ ಕಾರ್ಯಗಳಲ್ಲಿ ಕೆಲಸ ನಿರ್ವಹಿಸಲು ಇಂಟರ್ನ್‌ಶಿಪ್ ಒದಗಿಸಿಕೊಡುವುದು ಮುಖ್ಯ ಉದ್ದೇಶವಾಗಿದೆ.
ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಬಸವಪ್ರಭು ಜಿರ್ಲಿ ಮತ್ತು ಕೊಡಗು ವಿವಿ ಕುಲಪತಿ ಪ್ರೊ.ಅಶೋಕ ಆಲೂರ ಹಾಜರಿದ್ದರು.