

ಚಿತ್ರದುರ್ಗ: ಹಿಂದುಳಿದ ಜಿಲ್ಲೆ ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಹೆಚ್ಚಿದ್ದಾರೆ. ಶಿಕ್ಷಣ ಜಿಲ್ಲೆಯ ಭವಿಷ್ಯ ಬದಲಿಸುವ ಸಾಧನವಾಗಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಾಲ ನೀಡುವ ಗುರಿ ತಲುಪಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂನಲ್ಲಿ ಮಂಗಳವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಡಿಎಲ್‌ಆರ್‌ಸಿ(ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ)ಹಾಗೂ ಡಿಸಿಸಿ(ಜಿಲ್ಲಾ ಸಲಹಾ ಸಮಿತಿ)2ನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ 2025-26ನೇ ಸಾಲಿಗೆ 33.71 ಕೋಟಿ ರೂ. ಶೈಕ್ಷಣಿಕ ಸಾಲ ವಿತರಣೆ ಗುರಿ ಇದೆ. ಆದರೆ 3.21 ಕೋಟಿ ರೂ.ಸಾಲ ವಿತರಿಸಿವೆ. ಗೃಹಸಾಲ 163.32 ಕೋಟಿ ರೂ.ಪೈಕಿ 19.98 ಕೋಟಿ ರೂ. ವಿತರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣ ಹಾಗೂ ಗೃಹ ನಿರ್ಮಾಣ ಉತ್ತೇಜಿಸಬೇಕು. ಮುಂದಿನ ಸಭೆಯೊಳಗೆ ಗುರಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.
ಸರ್ಕಾರ ವಿವಿಧ ನಿಗಮ, ಮಂಡಳಿಗಳ ಸಾಲ ಸೌಲಭ್ಯಗಳಿಗೂ ಸಾಲ ಮಂಜೂರಾತಿ ನೀಡದೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಿಎಂಎಫ್‌ಎಂಇ ಅಡಿ 34, ವಿವಿಧ ನಿಗಮ, ಮಂಡಳಿಗಳ ಸಾಲ ಸೌಲಭ್ಯಗಳಡಿ ಬಾಕಿ ಇರುವ 117 ಅರ್ಜಿಗಳ ವಿಲೇಗೆ ವಾರದ ಒಳಗೆ ಕ್ರಮ ವಹಿಸಬೇಕು. ಕೃಷಿ, ಸಣ್ಣ ಕೈಗಾರಿಕೆಗಳು ಸೇರಿ ಇತರೆ ಆದ್ಯತಾ ವಲಯಗಳಿಗೆ ಸಾಲ ಸೌಲಭ್ಯ ಒದಗಿಸಬೇಕು ಎಂದರು.
ಜಿಪಂ ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಠೇವಣಿಯ ಶೇ.60 ರಷ್ಟು ಮೊತ್ತವನ್ನು ಸ್ಥಳೀಯರಿಗೆ ಸಾಲ ನೀಡಬೇಕು. ಆದರೆ, ಕೆಲ ಬ್ಯಾಂಕ್‌ಗಳು ಸಾಲ ಮಂಜೂರಾತಿಯಲ್ಲಿ ಈ ಅನುಪಾತ ಪಾಲಿಸುತ್ತಿಲ್ಲ. ಸಹಾಯ ಧನದ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡ ಪಾಲಿಸುವ ಪ್ರವೃತ್ತಿ ಬದಲಾಗಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಪ್ರಧಾನ ಮಂತ್ರಿ ಸೂಕ್ಷ್ಮಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರಿಕರಣ ಅಡಿ ಜಿಲ್ಲೆಯಲ್ಲಿ 100 ಘಟಕಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿಮಾಡಲಾಗಿದೆ. 40 ಅರ್ಜಿಗಳು ಸ್ವೀಕೃತವಾಗಿವೆ. 5 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 34 ಅರ್ಜಿಗಳು ಬಾಕಿಯಿವೆ. 1 ಅರ್ಜಿ ತಿರಸ್ಕೃತವಾಗಿದೆ ಎಂದರು.
ಪಿಎಂ ಸ್ವ-ನಿಧಿ ಯೋಜನೆ ಪ್ರಗತಿ ಕುರಿತಂತೆ ಮಾಹಿತಿ ನೀಡಿದ ಕೌಶಲಾಭಿವೃದ್ಧಿ ಇಲಾಖೆ ಅತೀಕ್, ಈ ಯೋಜನೆಯನ್ನು 2033ವರೆಗೆ ವಿಸ್ತರಿಸಲಾಗಿದೆ. ಸೆ.8 ರಿಂದ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ. ರಾಘವೇಂದ್ರ, ಜಿಪಂ ಸಿಪಿಒ ಗಾಯತ್ರಿ, ಆರ್‌ಬಿಐ ಪ್ರಬಂಧಕ ಅರುಣ್‌ಕುಮಾರ್, ಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಕೆ. ವಿನಂತ್, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಪ್ರಬಂಧಕ ಜನಾರ್ಧನ್ ಮತ್ತಿತರರು ಇದ್ದರು.