ಶೈಕ್ಷಣಿಕ ಗುರಿ ತಲುಪಲು ಶಿಸ್ತು, ಏಕಾಗ್ರೆತೆ ಅಗತ್ಯ

CTD C.R.CHANDARASHEKER-------
Published on

ಚಿತ್ರದುರ್ಗ: ವಿದ್ಯಾರ್ಥಿಗಳು ಶಿಸ್ತು, ಏಕಾಗ್ರತೆಯೊಂದಿಗೆ ನಿರಂತರ ಅಭ್ಯಾಸದಲ್ಲಿ ತೊಡಗಿದರೆ ಶೈಕ್ಷಣಿಕ ಗುರಿ ತಲುಪಲು ಸಾಧ್ಯವೆಂದು ಮಾನಸಿಕ ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಸಲಹೆ ನೀಡಿದರು.

ಶಿಕ್ಷಣ ಇಲಾಖೆ, ದೇವರಾಜ ಅರಸು ಎಜುಕೇಶನ್ ಸೊಸೈಟಿ, ಪ್ರಥಮ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ರಾಜ್ಯ ಜ್ಞಾನ-ವಿಜ್ಞಾನ ಸಮಿತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಇಂಡಿಯನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪರೀಕ್ಷೋತ್ಸವ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ರಾತ್ರಿಗಿಂತಲೂ ಮುಂಜಾನೆ ವ್ಯಾಸಂಗ ಮಾಡುವುದರಿಂದ ಮಿದುಳು ಹೆಚ್ಚು ವಿಷಯ ಗ್ರಹಿಸುತ್ತದೆ. ಮಾನಸಿಕ ಆರೋಗ್ಯ, ಶಿಸ್ತುಬದ್ಧ ದಿನಚರಿ ರೂಢಿಸಿಕೊಳ್ಳಿ. ಓದಿದ್ದನ್ನು ಬರೆಯುವುದರಿಂದ ಹೆಚ್ಚು ಅಂಕಗಳಿಸಲು ಸಾಧ್ಯ. ಶಿಕ್ಷಕರು, ಸ್ನೇಹಿತರು,ಪಾಲಕರೊಂದಿಗೆ ಕಲಿತ ವಿಷಯ ಚರ್ಚಿಸಿದರೆ, ಆತಂಕವಿಲ್ಲದೆ ಪರೀಕ್ಷೆ ಎದುರಿಸಬಹುದು ಎಂದು ಕಿವಿಮಾತು ಹೇಳಿದರು.

ಡಿಡಿಪಿಐ ಎಂ.ಆರ್.ಮಂಜುನಾಥ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಈ ಕಾರ್ಯಕ್ರಮ ಅತ್ಯಂತ ಉಪಯುಕ್ತ ಎಂದರು.

ಬಿಇಒ ಎಸ್.ನಾಗಭೂಷಣ್ ಮಾತನಾಡಿ, ಪರೀಕ್ಷೆ ಕುರಿತು ಉದಾಸೀನ ತೋರದೆ, ಸಮಯ ಪಾಲನೆಯೊಂದಿಗೆ ಶ್ರದ್ಧೆಯಿಂದ ಅಭ್ಯಾಸದಲ್ಲಿ ತೊಡಗಿ ಎಂದು ಸಲಹೆ ನೀಡಿದರು.

ಪರೀಕ್ಷಾ ನೋಡಲ್ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಅಂಜಿಕೆ ಬಿಟ್ಟು, ಹೆಚ್ಚಿನ ಪೂರ್ವಸಿದ್ಧತೆಯೊಂದಿಗೆ ಪರೀಕ್ಷೆ ಎದುರಿಸಿದರೆ, ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದರು.

ಕೆಜೆವಿಎಸ್ ಜಿಲ್ಲಾಧ್ಯಕ್ಷ ಎಚ್‌ಕೆಎಸ್ ಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಧರ್‌ಮಯ್ಯ, ಕೆ.ಜೆ.ಗೌಡ್ರು, ಮುಖ್ಯಶಿಕ್ಷಕರಾದ ಡಾ.ಮಹೇಶ್, ಕೀರ್ತಿಕುಮಾರ್, ಪಾಪಣ್ಣ, ಶ್ರೀಧರ್, ಹಾಲಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net