ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ

MAR 04-HRP-01
Published on

ಹರಪನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೆಲವೇ ದಿನ ಬಾಕಿ ಇದ್ದು, ಕಾಲಹರಣ ಮಾಡದೆ ಓದಿಕೊಳ್ಳಬೇಕಂದು ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಯಣ್ಣ ಪೂಜಾರ್ ಸಲಹೆ ನೀಡಿದರು.

ಕುಂಚೂರು ಗ್ರಾಮದಲ್ಲಿ ಪರೀಕ್ಷೆ ಒಂದು ಹಬ್ಬ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು-ಪಾಲಕರಿಗೆ ಭಿತ್ತಿಪತ್ರಗಳನ್ನು ವಿತರಿಸಿ ಮಂಗಳವಾರ ಮಾತನಾಡಿದರು. ವಿಶೇಷ ತರಬೇತಿ, ಗುಂಪು ಅಧ್ಯಯನ, ವಿದ್ಯಾರ್ಥಿಗಳ ವೈಯಕ್ತಿಕ ಕಡತ ನಿರ್ವಹಣೆ, ಪರಿಹಾರ ಭೋಧನೆ, ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ, ಶಾಲಾ ಅವಧಿಗೂ ಮುನ್ನ ವಿಶೇಷ ತರಗತಿ, ಘಟಕ ಪರೀಕ್ಷೆಗಳನ್ನು ನಿರಂತರವಾಗಿ ನಡೆಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಣೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.

ಪಾಕ್ಷಿಕ ಪರೀಕ್ಷೆ, ಪ್ರತಿ ಶನಿವಾರ ರಸಪ್ರಶ್ನೆ, ಪಾಲಕರ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಬಗೆಗೆ ಸಂವಾದ ನಡೆಸುವುದು, ಮಾಸಿಕವಾಗಿ ತಾಯಂದಿರ ಸಭೆ, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೊಂದಿಗೆ ಶಿಕ್ಷಣದಲ್ಲಿ ಸುಧಾರಣೆ ಹೊಂದಿರುವ ಮಕ್ಕಳ ಗುಂಪು ರಚಿಸಿ ಪೇರ್ ಬಡ್ಡಿಂಗ್ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಏಕರೂಪ ಕ್ರಿಯಾಯೋಜನೆ ಜಾರಿಗೊಳಿಸಿ ‘ಗೆಲುವಿನ ಹೆಜ್ಜೆ’ ಎಂಬ ಯೋಜನೆ ಮೂಲಕ ಮಕ್ಕಳ ಕಲಿಕಾ ಹಂತ ಸುಧಾರಣೆ, ಎಲ್ಲ ವಿಷಯಗಳ ಬಗ್ಗೆ ಪಾಸಿಂಗ್ ಪ್ಯಾಕೇಜ್ ನೀಡುವ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಇಲಾಖೆ ಅನುಸಾರ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ನಿತ್ಯ ಎಲ್ಲ ರೀತಿಯ ತಯಾರಿ ನಡೆಸಲಾಗುತ್ತಿದೆ, ಪರೀಕ್ಷೆ ಸಮೀಪಿಸುತ್ತಿದ್ದು, ಫೋನ್ ಹಾಗೂ ಟಿವಿಯಿಂದ ದೂರವಿಡಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜಯಣ್ಣ ಪೂಜಾರ್ ಸಲಹೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ವಿಜಯ್ ಕುಮಾರ್, ಗ್ರಾಪಂ ಅಧ್ಯಕ್ಷ ಕುಭ್ಯಾನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net