ಶೈಕ್ಷಣಿಕ ಗುಣಮಟ್ಟ ಬಲವರ್ಧನೆಗೆ ಆದ್ಯತೆ ನೀಡಿದ್ದೇನೆ

12NGD1
ನಂಜನಗೂಡಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಎನ್‌ಎಸ್‌ಎಸ್ ಸಮಾರೋಪ ಸಮಾರಂಭವನ್ನು ಶಾಸಕ ಬಿ.ಹರ್ಷವರ್ಧನ್ ಉದ್ಘಾಟಿಸಿದರು. ಮಹದೇವಸ್ವಾಮಿ, ಮಂಗಳಮ್ಮ, ಮಹೇಶ್ ಅತ್ತಿಖಾನೆ ಇದ್ದರು.
Published on

ನಂಜನಗೂಡು: ತಾಲೂಕಿನ ಶಾಲಾ ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ, ಬಲವರ್ಧನೆಗೆ ನನ್ನ ಆಡಳಿತಾವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.

ನಗರದ ನಾಗಮ್ಮ ಶಾಲಾ ಆವರಣದಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಎನ್‌ಎಸ್‌ಎಸ್ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾನು ಶಾಸಕನಾಗಿ ಆಯ್ಕೆಗೊಂಡಾಗ ಗ್ರಾಮೀಣ ಭಾಗದಲ್ಲಿ ಶಾಲೆಗಳ ಸ್ಥಿತಿ ಶೋಚನೀಯವಾಗಿತ್ತು. ಪಟ್ಟಣ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜುಗಳು ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಾಕಷ್ಟು ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿದ್ದವು. ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಆದ್ಯತಾನುಸಾರ ಶಾಲಾ ಕಾಲೇಜುಗಳಿಗೆ ಕೊಠಡಿಗಳು ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಯಿತು. ಕ್ಷೇತ್ರದಲ್ಲಿ 100 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದರು.

ವಿವೇಕ ಯೋಜನೆಯಡಿ 60 ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ. ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ 1.7 ಕೋಟಿ ರೂ., ಹುಲ್ಲಹಳ್ಳಿ ಸರ್ಕಾರಿ ಕಾಲೇಜಿಗೆ 1.5 ಕೋಟಿ ರೂ., ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 4 ಕೋಟಿ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಒತ್ತು ನೀಡಿದ್ದೇನೆ. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ನೆರವು ನೀಡಿರುವುದು ವೈಯಕ್ತಿಕವಾಗಿ ಆತ್ಮತೃಪ್ತಿ ಕೊಟ್ಟಿದೆ ಎಂದು ಹೇಳಿದರು.

ನಾನು ಯಾವುದೇ ಹುಸಿ ಭರವಸೆಗಳನ್ನು ನೀಡಿ ಮತದಾರರ ನಂಬಿಕೆಗೆ ದ್ರೋಹ ಎಸಗಿಲ್ಲ. ನುಡಿದಂತೆ ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಹಿಡಿದುಕೊಂಡು ಅನುದಾನ ತಂದಿದ್ದಾರೆ ಎಂದು ಕೆಲವರು ಟೀಕೆ ಮಾಡುತ್ತಾರೆ. ಏಕೆ ನನಗೆ ಮಾತು ಬರಲ್ವೇ, ಅಭಿವೃದ್ಧಿ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

ನಾನು ಮಾಡಿರುವ ಅಭಿವೃದ್ಧಿ ಬಗ್ಗೆ ಶ್ರೀನಿವಾಸಪ್ರಸಾದ್ ಅವರ ಗಮನಕ್ಕೆ ಇನ್ನೂ ತಂದಿಲ್ಲ. ಕ್ಷೇತ್ರಕ್ಕೆ 600 ಕೋಟಿ ರೂ.ಅನುದಾನ ತರಲು ವಿಧಾನಸೌಧದಲ್ಲಿ ಒಬ್ಬಂಟಿಯಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿರುವ ಶ್ರಮ ನನಗೆ ಮಾತ್ರ ಗೊತ್ತಿದೆ ಎಂದರು.

ದೇಶದ ಅಭಿವೃದ್ಧಿಯ ಹಿಂದೆ ಯುವಶಕ್ತಿ ಪಾತ್ರ ಮಹತ್ವದ್ದು. ಯುವಜನತೆ ತಮ್ಮ ಮತವನ್ನು ವಿವೇಕ ಹಾಗೂ ವಿವೇಚನೆಯಿಂದ ಚಲಾಯಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಯಾರು ಪೂರಕವಾಗಿ ಶ್ರಮಿಸಿದ್ದಾರೆ ಎಂಬುದನ್ನು ಅವಲೋಕನ ಮಾಡಿ ತಮ್ಮ ಮತವನ್ನು ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು.

ನಗರಸಭಾಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಸದಸ್ಯೆ ಮಂಗಳಮ್ಮ, ಸಿಡಿಸಿ ಖಜಾಂಚಿ ಡಾ.ಶ್ರೀಧರ್ ವೈದ್ಯ, ಪ್ರಾಂಶುಪಾಲ ಚಂದ್ರಶೇಖರ್ ಬಾಬು, ವಕೀಲ ಪಿ.ಮಹೇಶ್ ಅತ್ತಿಖಾನೆ, ಕಬ್ಬಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಸವನಾಯ್ಕ, ಉಪನ್ಯಾಸಕರಾದ ರಾಜಣ್ಣ, ನಟರಾಜು, ಮಹದೇವಯ್ಯ, ಇಂದ್ರ, ಸೌಮ್ಯಲಕ್ಷ್ಮೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net