

ಮೈಸೂರು: ಮೈಸೂರೆಂದರೆ ಜಗದ್ವಿಖ್ಯಾತ ಅರಮನೆಗಳ ನಾಡು, ಸಾಂಸ್ಕೃತಿಕ ನಗರಿಯ ಬೀಡು ಹೇಗೋ ಹಾಗೆ ಶಿಕ್ಷಣ ಕಾಶಿಯೂ ಆಗಿದ್ದು, ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಕೊಡುಗೆಯೂ ಅಪಾರವಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಜೆಎಸ್‌ಎಸ್ ಬಡಾವಣೆಯ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಜೆಎಸ್‌ಎಸ್ ಪ್ರೌಢ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಮಹತ್ವವನ್ನು ಅರಿತಿದ್ದ ದೂರದೃಷ್ಟಿಯುಳ್ಳ ಸುತ್ತೂರು ಶ್ರೀಮಠದ 23ನೇ ಪೀಠಾಧೀಶರಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ವಿಚಾರದಲ್ಲಿ ಮೈಸೂರಿನತ್ತ ಜಗತ್ತು ತಿರುಗಿ ನೋಡುವ ಹಾಗೆ ಮಾಡಿದರು ಎಂದರು.
ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅನ್ನದಾಸೋಹದೊಡನೆ ಅಕ್ಷರ ದಾಸೋಹವನ್ನೂ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರಾರಂಭಿಸಿದರು. ಇಂತಹ ಶಿಕ್ಷಣ ಸೇವಾ ದೀಕ್ಷೆಯನ್ನು ಅವರ ನಂತರ ಅಷ್ಟೇ ಕಾಳಜಿಯಿಂದ ಮುಂದುವರಿಸಿಕೊಂಡು ಬಂದಿರುವ ಶ್ರೀ ಸುತ್ತೂರು ಮಠದ 24ನೇ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರಸ್ವಾಮೀಜಿ ತ್ರಿವಿಧ ದಾಸೋಹದಲ್ಲಿ ಅದರಲ್ಲೂ ವಿಶೇಷವಾಗಿ ಶಿಕ್ಷಣ ಕಾಯಕದಲ್ಲಿ ಜಗತ್ತಿಗೇ ಮಾದರಿಯಾಗಿದ್ದಾರೆ. ಇಂತಹ ಮಹತ್ವ ಹೊಂದಿರುವ ಜೆಎಸ್‌ಎಸ್ ಶಾಲೆಯಲ್ಲಿ ಓದುವುದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೆಮ್ಮೆ ಪಡಬೇಕು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸಿದ್ದರಾಮಯ್ಯ, ಫಲಿತಾಂಶದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅಂಕಗಳಿಕೆ ಮುಖ್ಯವಾದರೂ ವಿದ್ಯಾರ್ಥಿಗಳು ಮಾನವೀಯ ಅಂತಃಕರಣ ಬೆಳೆಸಿಕೊಳ್ಳಬೇಕು. ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಬಹುದೊಡ್ಡದು. ವಿದ್ಯೆಯಿಂದ ಏನುಬೇಕಾದರೂ ಸಾಧಿಸಬಹುದು. ಆದರೆ ಇಂಥ ಸಾಧನೆಗೆ ಕಾರಣಕರ್ತರಾದ ಕಲಿಸಿದ ಶಿಕ್ಷಕರನ್ನು, ಕಲಿತ ಶಾಲೆಯನ್ನು ಹಾಗೂ ಪಾಲಕರನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಲೇಶಿಯದ ವೈದ್ಯ ಡಾ.ಪ್ರಸನ್ನಕುಮಾರ್ ಮಾತನಾಡಿ, ಒಂದು ಅಕ್ಷರ ಕಲಿಸಿದವರಿಗೂ ನಾವು ದಾಸರಾಗಿರಬೇಕೆಂಬ ಮಾತೊಂದು ಇದೆ. ಹಾಗಾಗಿ ವಿದ್ಯೆ ಕಲಿಸಿದ ನಿಮ್ಮ ಶಿಕ್ಷಕ, ಶಿಕ್ಷಕಿಯರಿಗೆ ನೀವು ಸದಾ ಋಣಿಯಾಗಿರಬೇಕು. ಎಲ್ಲಕ್ಕೂ ಮೊದಲು ಗುರು. ಗುರುಭಕ್ತಿ ಇದ್ದಲ್ಲಿ ಸಾಧನೆಗೆ ಬಹುಬೇಗ ಹತ್ತಿರವಾಗಬಹುದು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಯರಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್. ಅಜಯ್, ರೂಪಶ್ರೀ, ಗಿರಿಯಾಭೋವಿ ಪಾಳ್ಯ ಸರ್ಕಾರಿ ಪ್ರೌಢಶಾಲೆಯ ಧನುಶ್ರೀ, ಫಾತಿಮಾ ಮತ್ತು ದೀಪ್ತಿ, ಸಿದ್ದಾರ್ಥನಗರ ಜಿಎಸ್‌ಎಸ್ ಪ್ರೌಢಶಾಲೆಯ ಸೋಮಶೇಖರ್, ಗೌಶಿಯಾನಗರ ಸರ್ಕಾರಿ ಪ್ರೌಢಶಾಲೆಯ ಸುಮಾಬ್‌ಖಾನ್, ಡಾ.ರಾಜಕುಮಾರ್ ರಸ್ತೆಯ ಜೆಎಸ್‌ಎಸ್ ಪ್ರೌಢಶಾಲೆಯ ಉಜ್ಮಾ, ಆರ್. ಯೋಗೀಶ್, ಷಾಪಿಯಾ, ಶಿಶುನಾಳ ಶರೀಫ್ ಪ್ರೌಢಶಾಲೆಯ ಮೇಘನಾ ಮತ್ತು ವಿದ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ಸಂದರ್ಭ ನಿವೃತ್ತ ಶಿಕ್ಷಕಿ ಕೆರೋಡಿ ಎಂ.ಲೋಲಾಕ್ಷಿ ಸಾಮಾನ್ಯ ಜ್ಞಾನಕ್ಕೆ ಪೂರಕವಾದ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಲೇಖಕಿ ಡಾ.ಜಮುನಾರಾಣಿ ಮಿರ್ಲೆ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಮುಖ್ಯಶಿಕ್ಷಕಿ ಸುಶೀಲ, ಸಂಖ್ಯಾಶಾಸ್ತ್ರಜ್ಞ ಎಸ್. ಜಿ. ಸೀತಾರಾಂ, ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂ. ಮುತ್ತುಸ್ವಾಮಿ, ಶಿಕ್ಷಕರಾದ ಡಿ.ನಾಗರಾಜಪ್ಪ, ಬಿ.ರೇಣುಕಪ್ರಸಾದ್, ಎಚ್.ಎಂ. ಮಹದೇವಸ್ವಾಮಿ, ಆರ್.ಮಹಾಲಕ್ಷ್ಮಿ, ಎನ್.ರೂಪಶ್ರೀ, ಸಿ.ರಶ್ಮಿ , ಎಂ.ಮಂಜುಳಾ, ಜ್ಯೋತಿ ಹಾಗೂ ಇತರರು ಇದ್ದರು.