ಶೇಡಬಾಳದಲ್ಲಿ ಶಾಸಕ ಶ್ರೀಮಂತ ಕಮಾಲ್

30Kagwad-1
ಶೇಡಬಾಳ ಪಪಂಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳು ಸಂಭ್ರಮಿಸಿದರು.
Published on

ಕಾಗವಾಡ: ತಾಲೂಕಿನ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಶೇಡಬಾಳ ಪಪಂ ಬಿಜೆಪಿ, ಐನಾಪುರ ಪಪಂನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಉಗಾರ ಖುರ್ದ ಪುರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆಯದೆ ಅತಂತ್ರ ಫಲಿತಾಂಶ ಬಂದಿದೆ.

ಶಾಸಕ ಶ್ರೀಮಂತ ಪಾಟೀಲ ಹಾಗೂ ಅವರ ಪುತ್ರ ಶ್ರೀನಿವಾಸ ಪಾಟೀಲ ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಶೇಡಬಾಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಸಲಾಗಿತ್ತು. ಇದರ ಫಲವಾಗಿ 16 ಸ್ಥಾನಗಳ ಪೈಕಿ ಬಿಜೆಪಿ 11 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಉಳಿದಂತೆ ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನಗಳಿಗೆ ತೃಪ್ತಿಪಡೆದಿದ್ದಾರೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಮತದಾರರು ಜೈ ಎಂದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳ ಪೈಕಿ ಓರ್ವ ಬಿಜೆಪಿ ಬೆಂಬಲಿತನಾಗಿದ್ದು, ಒಟ್ಟಿನಲ್ಲಿ 12 ಸ್ಥಾನಗಳನ್ನು ಬಿಜೆಪಿ ಪಡೆದಂತಾಗಿದೆ.

ಒಲಿಯದ ವಿಜಯಲಕ್ಷ್ಮೀ: ಶೇಡಬಾಳ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 12ನೇ ವಾರ್ಡ್‌ನಿಂದ ಬಿಜೆಪಿಯ ರೋಹಿಣಿ ಪ್ರಕಾಶ ಮಾಳಿ ಹಾಗೂ ಕಾಂಗ್ರೆಸ್‌ನಿಂದ ಮಾಲಾಶ್ರೀ ಮನೋಜ ಪವಾರ ಸ್ಪರ್ಧಿಸಿದ್ದರು. ಇಬ್ಬರೂ ಸಮಾನ ಮತ ಪಡೆದ ಕಾರಣ ಚೀಟಿ ಎತ್ತಲಾಯಿತು. ಅದೃಷ್ಟದ ಆಟದಲ್ಲಿ ಬಿಜೆಪಿಯ ರೋಹಿಣಿಗೆ ವಿಜಯಮಾಲೆ ಒಲಿಯಿತು.

ಉಗಾರ ಖುರ್ದ ಪುರಸಭೆ ಅತಂತ್ರ: ಉಗಾರ ಖುರ್ದ ಪುರಸಭೆಯ 23 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್-11, ಬಿಜೆಪಿ-7 ಹಾಗೂ ಪಕ್ಷೇತರರು 5 ಸ್ಥಾನಗಳಲ್ಲಿ ವಿಜಯಶಾಲಿಗಳಾಗಿದ್ದು, ಯಾವುದೇ ಪಕ್ಷಕ್ಕೆ ಬಹುಮತ ದೊರೆಯದ ಕಾರಣ ಆಡಳಿತದ ಚುಕ್ಕಾಣೆ ಹಿಡಿಯಲು 2 ಪಕ್ಷಗಳು ಪಕ್ಷೇತರರ ಬೆಂಬಲ ಪಡೆದುಕೊಳ್ಳುವುದು ಅತ್ಯವಶ್ಯವಾಗಿದೆ. ಇದರಿಂದಾಗಿ ಉಗಾರ ಖುರ್ದ ಪುರಸಭೆ ಅತಂತ್ರವಾಗಿದ್ದು ಯಾವ ಪಕ್ಷವು ಪುರಸಭೆಯ ಆಡಳಿತ ಚುಕ್ಕಾಣೆ ಹಿಡಿಯುತ್ತದೆ ಎಂದು ಮತದಾರರು ಆತುರತೆಯಿಂದ ಕಾಯುತ್ತಿದ್ದಾರೆ.
ಐನಾಪುರ ಪಪಂ ಹಸ್ತದ ವಶ: ಐನಾಪುರ ಪಪಂನ 19 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದರೆ,
ಬಿಜೆಪಿ ಕೇವಲ 6 ಸ್ಥಾನಗಳಿಗೆ ತೃಪ್ತಿ ಪಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net