ಶೇಕಡಾ 35 ಮಕ್ಕಳಲ್ಲಿ ಅಪೌಷ್ಟಿಕತೆ

1
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ

ದೇಶದಲ್ಲಿ ಶೇ.35 ಮಕ್ಕಳು ಅಪೌಷ್ಟಿಕತೆ, ಶೇ.10 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಪೌಷ್ಟಿಕ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ಜತೆಗೆ ಮೊಟ್ಟೆ, ಚಿಕ್ಕಿ, ಹಾಲು ಸೇರಿ ನ್ಯೂಟ್ರಿಷನ್ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ನಗರದ ಜಿಕೆಬಿಎಂಎಸ್ ಶಾಲೆ ಆವರಣದಲ್ಲಿ ವೋಲ್ವೋ ಕಂಪನಿಯ ಸಿಎಸ್‌ಆರ್ ಅನುದಾನ ಹಾಗೂ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೊಸಕೋಟೆಯಲ್ಲಿ ವೋಲ್ವೋ ಕಂಪನಿ ಸ್ಥಾಪನೆಗೆ ಬಿ.ಎನ್.ಬಚ್ಚೇಗೌಡ ಅವರು ಕಾರಣೀಕರ್ತರಾದ ಹಿನ್ನೆಲೆ ಕರೊನಾ ಸಂದರ್ಭದಲ್ಲಿ ಉಚಿತ ಆಹಾರ ಕಿಟ್, ಹಳ್ಳಿಹಳ್ಳಿಗೆ ಮೊಬೈಲ್ ಕ್ಲಿನಿಕ್, ಶಾಲಾ ಕೊಠಡಿ ನಿರ್ಮಾಣ, ಅಂಗನವಾಡಿಗಳ ಅಭಿವೃದ್ಧಿ, ಶೌಚಗೃಹಗಳ ನಿರ್ಮಾಣದಂತಹ ಸಾಮಾಜಿಕ ಕೆಲಸ ಕಾರ್ಯಗಳನ್ನು ಕಂಪನಿ ಮಾಡುತ್ತಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಡಿಡಿಪಿಐ ಬೈಲಾಂಜಿನಪ್ಪ ಮಾತನಾಡಿ, ಬಡ ಮಕ್ಕಳಲ್ಲಿ ದೈಹಿಕ ನ್ಯೂನ್ಯತೆ ಹೆಚ್ಚಾಗಿ ಕಂಡು ಬರುತ್ತಿದ್ದು, ಸಮಸ್ಯೆ ನಿವಾರಣೆಗೆ ಸರ್ಕಾರ ಕ್ರಮವಹಿಸಿದೆ. ಮಧ್ಯಾಹ್ನ ಬಿಸಿಯೂಟದ ಜತೆಗೆ ಅಜಿಂ ಪ್ರೇಮ್‌ಜಿ ಫೌಂಡೇಷನ್ ಸಹಕಾರದಿಂದ 1,950 ಕೋಟಿ ರೂ. ವೆಚ್ಚದಲ್ಲಿ ವಾರದ ಆರು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಮಕ್ಕಳು ಸೌಲಭ್ಯ ಸದ್ಬಳಸಿಕೊಂಡು ಸದೃಢರಾಬೇಕು ಎಂದರು. ಎಸ್‌ಡಿಎಂಸಿ ಗೌರವಾಧ್ಯಕ್ಷ ಡಿ.ಎಸ್.ರಾಜ್ ಕುಮಾರ್, ನಗರಸಭೆ ಸದಸ್ಯ ಗೌತಮ್, ನಾಮನಿ ಸದಸ್ಯರಾದ ರಮಾ ದೇವಿ, ಅಮ್ಜದ್ ಪಾಷಾ, ಗಣೇಶ್, ಡಿಡಿಪಿಐ ಬೈಲಾಂಜಿನಪ್ಪ, ಬಿಇಒ ಪದ್ಮನಾಭ, ಪೌರಾಯುಕ್ತೆ, ಮುಖಂಡರಾದ ಹೊಸಹಳ್ಳಿ ಪ್ರಕಾಶ್, ಬಚ್ಚಣ್ಣ, ಮಲ್ಲಸಂದ್ರ ಶೇಷಪ್ಪ ಇದ್ದರು.

25 ರಾಜ್ಯಗಳ 50 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆ: ಉತ್ತಮ ಆರೋಗ್ಯ ಹಾಗೂ ದೇಹದ ಸದೃಢ ಬೆಳವಣಿಗೆಗೆ ನ್ಯೂಟ್ರಿಷನ್ ಆಹಾರ ಪೂರಕವಾಗಿದ್ದು, 25 ರಾಜ್ಯಗಳಲ್ಲಿ 50 ಲಕ್ಷ ಮಕ್ಕಳಿಗೆ ಈ ಆಹಾರ ಪೂರೈಸಲಾಗುತ್ತಿದೆ. ವಿಟಮಿನ್, ಮೈಕ್ರೋ ನ್ಯೂಟ್ರಿಷನ್ ಸೇರಿ ಅಗತ್ಯ ಪೌಷ್ಟಿಕಾಂಶಗಳು ಈ ಆಹಾರ ಪದಾರ್ಥಗಳಲ್ಲಿದ್ದು, ಮಕ್ಕಳು ಸೇವಿಸಿ ದೈಹಿಕ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಅನ್ನಪೂರ್ಣ ಟ್ರಸ್ಟ್ ನಿರ್ದೇಶಕ ಜಯಪ್ರಕಾಶ್ ತಿಳಿಸಿದರು.

ವಿವೇಕ ಯೋಜನೆಯಡಿ 26 ಕೊಠಡಿಗಳ ನಿರ್ಮಾಣ: ವಿವೇಕ ಯೋಜನೆಯಡಿ ತಾಲೂಕಿಗೆ 26 ಕೊಠಡಿಗಳು ಮಂಜುರಾಗಿದ್ದು, 22 ಕೊಠಡಿಗಳು ಮುಕ್ತಾಯದ ಹಂತದಲ್ಲಿವೆ. ಪ್ರತಿ ಜಿಲ್ಲೆಗೆ 8 ರಿಂದ 10 ಕಂಪನಿಗಳನ್ನು ಒಗ್ಗೂಡಿಸಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಅದರಂತೆ ತಾಲೂಕಿನಲ್ಲಿ ವೋಲ್ವೋ, ಪ್ರೆಸ್ಟೀಜ್ ಕಂಪನಿಗಳ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದ್ದು, ತಾಲೂಕಿನ ಶೇ.22 ಶಿಕ್ಷಕರ ಕೊರತೆಯನ್ನು ಅತಿಥಿ ಶಿಕ್ಷಕರ ಮೂಲಕ ನೀಗಿಸಲಾಗಿದೆ ಎಂದು ಬಿಇಒ ಬೈಲಾಂಜಿನಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net