ಶೇಂಗಾ ಬೆಳೆ ಜತೆ ರೈತರೂ ನಿತ್ರಾಣ ಸ್ಥಿತಿಗೆ

CLK SHENGA 16
Published on

ಚಳ್ಳಕೆರೆ: ಕಳೆದ ವರ್ಷ ಅತಿವೃಷ್ಟಿ, ಈ ಬಾರಿ ಅನಾವೃಷ್ಟಿ… ಹೀಗೆ ಒಂದಲ್ಲಾ ಒಂದು ಕಾರಣದಿಂದ ಅಂದಾಜು 10 ವರ್ಷಗಳಿಂದ ಶೇಂಗಾ ಫಸಲು ರೈತರಿಗೆ ಧಕ್ಕದ ಕಾರಣ ಬೆಳೆಗಾರರ ಗೋಳು ಹೇಳತೀರದಾಗಿದೆ.
ತಾಲೂಕಾದ್ಯಂತ ಈ ಬಾರಿ ಮಳೆಯ ಕೊರತೆಯಿಂದ ಮಳೆಯಾಶ್ರಿತ ಶೇಂಗಾ ಬೆಳೆ ಸಂಪೂರ್ಣ ಒಣಗುವ ಹಂತಕ್ಕೆ ತಲುಪಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮುಂಗಾರು ಆರಂಭದಲ್ಲೇ ಮಳೆ ಕುಂಠಿತವಾಗಿ ಶೇಂಗಾ ಬಿತ್ತನೆ ಕಾರ್ಯಕ್ಕೆ ಭಾರಿ ಹಿನ್ನ್ನಡೆಯಾಗಿತ್ತು. ಜೂನ್ ತಿಂಗಳಿಗೆ ಶೇ.80ರಷ್ಟು ಬಿತ್ತನೆ ಆಗಬೇಕಾಗಿದ್ದ ನಿಗದಿತ ಗುರಿ ಕೇವಲ 25ರಷ್ಟು ಮಾತ್ರ ಬಿತ್ತನೆ ಆಗಿತ್ತು. ಜುಲೈನಲ್ಲಿ ಜಡಿ ಮಳೆಯಿಂದಾಗಿ ಒಂದಿಷ್ಟು ಚುರುಕುಗೊಂಡ ಬಿತ್ತನೆ ಕಾರ್ಯ ಶೇ.75ಕ್ಕೆ ತಲುಪಿದೆ. ಈ ವರ್ಷದ 78.225 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿಯಲ್ಲಿ ಇದುವರೆಗೂ 74.052 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಜೂನ್ ಆರಂಭದಲ್ಲೇ ಬಿತ್ತನೆ ಮಾಡಿರುವ ಶೇಂಗಾ ಬೆಳೆಯಲ್ಲಿ ರೈತರು ಎಡೆಕುಂಟೆ ಹೊಡೆದು ಕಳೆ ಸ್ವಚ್ಛ ಮಾಡಿಟ್ಟುಕೊಂಡಿದ್ದಾರೆ.
ಇತ್ತೀಚೆಗೆ ಬಿತ್ತನೆ ಮಾಡಿರುವ ಬೆಳೆ ಮಳೆ ಕೊರತೆ ಅನುಭವಿಸುತ್ತಿದ್ದು, ಗಿಡಗಳು ಸಂಪೂರ್ಣ ಸೊರಗುತ್ತಿವೆ. ಕೆಲ ಭಾಗದಲ್ಲಿ ರೋಗಗಳಿಗೆ ತುತ್ತಾಗುತ್ತಿವೆ.
ಒಂದು ಎಕರೆ ಬಿತ್ತನೆ ಕಾರ್ಯಕ್ಕೆ 25ರಿಂದ 30 ಸಾವಿರ ರೂ. ಖರ್ಚು ಮಾಡಿದ್ದೇವೆ. ಸರ್ಕಾರದಿಂದ ಬಿಡುಗಡೆ ಆಗಬೇಕಾದ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಸಮರ್ಪಕವಾಗಿ ರೈತರಿಗೆ ಸಿಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಮತ್ತೆ ಸಾಲದ ಹೊರೆ ಏರುತ್ತಲೇ ಸಾಗುತ್ತಿದೆ ಎನ್ನುವುದು ರೈತರ ಅಳಲು.

ಐದು ಎಕರೆ ಶೇಂಗಾ ಬಿತ್ತನೆಗೆ 1.5 ಲಕ್ಷ ಖರ್ಚು ಮಾಡಲಾಗಿದೆ. 2 ತಿಂಗಳ ಹಿಂದೆ ಬಿತ್ತನೆ ಮಾಡಲಾಗಿದ್ದ ಬೆಳೆ ವಾಡಿಕೆ ಮಳೆ ಇಲ್ಲದೆ ಬೆಳವಣಿಗೆ ಆಗಿಲ್ಲ. ಕಳೆದ ವರ್ಷ ಬೆಳೆ ಕೈಗೆ ಧಕ್ಕಲಿಲ್ಲ. ಬೆಳೆವಿಮೆಯೂ ಸಿಗಲಿಲ್ಲ. ಈ ವರ್ಷವಾದರೂ ವಿಮೆ ಬಿಡುಗಡೆ ಮಾಡಬೇಕು. ಬರಪೀಡಿತ ತಾಲೂಕು ಎಂದು ಘೋಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಬಿ.ಅಂಜನ್‌ಕುಮಾರ್, ರೈತ, ಚಟ್ಟೇಕಂಬ


ಮಳೆಯ ಏರುಪೇರಿನಿಂದಾಗಿ ನಿಗದಿತ ಅವಧಿಗೆ ಬಿತ್ತನೆ ಕಾರ್ಯ ನಡೆದಿಲ್ಲ. ಆದರೂ ಶೇ.80ರಷ್ಟು ಬಿತ್ತನೆ ಆಗಿದೆ. ಪ್ರಸ್ತುತ ಶೇಂಗಾ ಗಿಡಗಳಿಗೆ ಮಳೆ ಅಗತ್ಯವಿದೆ. ಇನ್ನು 3 ವಾರ ಮಳೆ ಬಾರದಿದ್ದರೆ ಶೇಂಗಾ ಗಿಡಗಳಲ್ಲಿ ಯಾವುದೇ ಸಾರ ಇಲ್ಲದೆ ಇಳುವರಿ ಸಿಗುವುದಿಲ್ಲ. ಸಂಪೂರ್ಣ ಬೆಳೆ ನಷ್ಟ ಆಗಲಿದೆ.
ಜೆ.ಅಶೋಕ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net