ಶೇಂಗಾ ಬೆಂಬಲ ಬೆಲೆ ಖರೀದಿ ಆರಂಭ

3KDL1
Published on

ಕುಂದಗೋಳ: ಕೇಂದ್ರ ಸರ್ಕಾರವು ರೈತರ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದೆ ಎಂದು ಮಾಜಿ ಶಾಸಕ, ಕರ್ನಾಟಕ ಎಣ್ಣೆ ಬೆಳೆಗಾರರ ಸಹಕಾರಿ ಸಂಘದ ನಿರ್ದೇಶಕ ಎಂ.ಎಸ್. ಅಕ್ಕಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶೇಂಗಾ ಬೆಳೆ ಖರೀದಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂಬರುವ ವರ್ಷದಲ್ಲಿ ಶೇಂಗಾ ಬೆಳೆ ಕ್ಷೇತ್ರವನ್ನು ಹೆಚ್ಚು ಮಾಡಲು ನಿಗಮದಿಂದ ಹೆಚ್ಚು ಪ್ರೋತ್ಸಾಹ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಔಷಧಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಅರವಿಂದ ಕಟಗಿ ಮಾತನಾಡಿ, ಪ್ರಸಕ್ತ ವರ್ಷ ಅತೀ ಹೆಚ್ಚು ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಅದುಳಿದ ಬೆಳೆ ರಕ್ಷಿಸಿಕೊಳ್ಳಲು ರೈತರು ಕಷ್ಟಪಟ್ಟಿದ್ದಾರೆ. ಕ್ವಿಂಟಾಲ್ ಶೇಂಗಾಕ್ಕೆ 7000 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಸದನದಲ್ಲಿ ಶೇಂಗಾ ಬೆಳೆಗೆ ಹೆಚ್ಚು ದರವನ್ನು ನಿಗದಿ ಮಾಡುವಂತೆ ಒತ್ತಾಯಿಸುತ್ತೇನೆ ಎಂದರು. ಎಪಿಎಂಸಿ ಅಧ್ಯಕ್ಷ ಬೀರಪ್ಪ ಕುರುಬರ, ಸುರೇಶ ಗಂಗಾಯಿ, ಜಗದೀಶ ಉಪ್ಪಿನ, ಎಫ್.ಸಿ. ಫಕೀರಗೌಡ, ಕೆ.ಆರ್. ಡಗಲಿ, ಅಜೀಜ್ ಕ್ಯಾಲಕೊಂಡ, ಬಸವರಾಜ ಶಿರಸಂಗಿ, ಮೊದಲಾದವರು ಉಪಸ್ಥಿತರಿದ್ದರು.

ಶೇಂಗಾ ಬೆಳೆಗಾರರ ನೋಂದಣಿಗೆ ಸೂಚನೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಕೇಂದ್ರವನ್ನು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯಲ್ಲಿ ಸೋಮವಾರದಿಂದ ಆರಂಭಿಸಲಾಗಿದ್ದು, ರೈತರು ಹೆಸರು ನೋಂದಣಿ ಮಾಡಬಹುದಾಗಿದೆ.

ಆಧಾರ ಕಾರ್ಡ್, ಉತಾರ, ಆಧಾರ್ ಲಿಂಕ್ ಇರುವ ಬ್ಯಾಂಕ್ ಪಾಸ್ ಬುಕ್, ರೈತ ಸಂಪರ್ಕ ಕೇಂದ್ರದ ದೃಢೀಕರಣ ಪತ್ರದೊಂದಿಗೆ ರೈತರು ಹೆಸರು ನೋಂದಾಯಿಸಲು ಎರಡು ವಾರ ಕಾಲಾವಕಾಶ ನೀಡಲಾಗಿದೆ. ಒಂದು ಎಕರೆಗೆ 6 ಕ್ವಿಂಟಾಲ್​ನಂತೆ ಗರಿಷ್ಠ 15 ಕ್ವಿಂಟಾಲ್​ವರೆಗೆ ಖರೀದಿ ಮಿತಿ ನಿಗದಿಪಡಿಸಲಾಗಿದೆ. ಶಿರಗುಪ್ಪಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಿಂದ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ರಾಮಚಂದ್ರ ಜಾಧವ ತಿಳಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ, ನವಲಗುಂದ ತಾಲೂಕಿನ ಆಯಟ್ಟಿ ಶಿರೂರ, ತಾಲೂಕಿನ ಕುಂದಗೋಳ, ಸಂಶಿ, ಇಂಗಳಗಿ, ಯಲಿವಾಳ, ಹಿರೇಹರಕುಣಿ, ಕಮಡೊಳ್ಳಿ ಸೇರಿ ಒಟ್ಟು ಎಂಟು ಗ್ರಾಮಗಳಲ್ಲಿ ಬೆಂಬಲ ಬೆಲೆಯ ಶೇಂಗಾ ಖರೀದಿ ಕೇಂದ್ರ ತೆರೆಯಲಾಗಿದೆ. ಒಂದು ಕ್ವಿಂಟಾಲ್ ಶೇಂಗಾಕ್ಕೆ 5090 ರೂ. ಬೆಂಬಲ ಬೆಲೆ ಘೊಷಣೆಯಾಗಿದೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ಶೇಂಗಾ ಮಾರಾಟ ಮಾಡಬೇಕು. | ಎಂ.ಎಸ್. ಅಕ್ಕಿ, ಮಾಜಿ ಶಾಸಕ

ರೈತರು ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಶೇಂಗಾವನ್ನು 4500 ರೂಪಾಯಿಗೆ ಮಾರಿದರೂ ನಷ್ಟ ಸರಿದೂಗಿಸುವುದು ಸವಾಲಾಗಿತ್ತು. ಸರ್ಕಾರ ಶೇಂಗಾ ಬೆಳೆಯನ್ನು ಕ್ವಿಂಟಾಲ್​ಗೆ 5090 ರೂ. ಬೆಂಬಲ ಬೆಲೆ ನೀಡಿ ಖರೀದಿಸುತ್ತಿರುವುದು ರೈತರಿಗೆ ಅನುಕೂಲವಾಗಲಿದೆ. | ಜೆ.ಬಿ. ಉಪ್ಪಿನ, ತಾಪಂ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net