ಶೇ. 99.22ರಷ್ಟು ಗ್ಯಾರಂಟಿ ಸಮರ್ಪಕ ಅನುಷ್ಠಾನ

23ark3
Published on

ಅರಕಲಗೂಡು: ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಶೇ. 99.22ರಷ್ಟು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದು, ಯೋಜನೆಯ ಲಾಭ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್‌ಗೌಡ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಐದು ಗ್ಯಾರೆಂಟಿ ಯೋಜನೆಗಳಿಂದ ತಾಲೂಕಿಗೆ ಸುಮಾರು 100 ಕೋಟಿ ರೂ. ಸಹಾಯಧನ ಎಲ್ಲ ಫಲಾನುಭವಿಗಳಿಗೆ ಲಭ್ಯವಾಗುತ್ತಿದೆ. ಹೀಗಿದ್ದರೂ ಕೂಡ ಸೌಕರ್ಯ ಪಡೆಯುತ್ತಿರುವ ಜನರಲ್ಲಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಬಗ್ಗೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿಲ್ಲ. ಆಯಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ಎರಡು ಸಾರಿಗೆ ಸಂಸ್ಥೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ರಾಮನಾಥಪುರ ಘಟಕದಿಂದ ಪ್ರತಿ ತಿಂಗಳು 5ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಅಂದಾಜು 2.29 ಕೋಟಿ ರೂ. ಅಧಿಕ ಹಣ ಸಂಸ್ಥೆಗೆ ಸರ್ಕಾರ ನೀಡುತ್ತಿದೆ. ಇದುವರೆಗೂ 43 ಕೋಟಿ ರೂ. ಹಣ ಸಂದಾಯವಾಗಿದೆ. ಅದೇ ರೀತಿಯ ಅರಕಲಗೂಡು ಘಟಕದಿಂದ ಸಂಚರಿಸುವ ಬಸ್‌ಗಳಲ್ಲಿ 4.60 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ. 2.26ಕೋಟಿ ರೂ. ರೇವಿನ್ಯೂ ಆಗಿದೆ. ಈ ಎರಡು ಘಟಕಗಳಿಂದ ಒಟ್ಟು ಒಂದು ಕೋಟಿಗೂ ಹೆಚ್ಚು ಮಂದಿ ಪ್ರಯಾಣ ಮಾಡಿದ್ದಾರೆ. 86ಕೋಟಿಗೂ ಅಧಿಕ ಹಣ ಈ ಎರಡು ಡಿಪೋಗಳಿಗೆ ಸಂದಾಯವಾಗಿದೆ ಎಂದರು.

ತಾಲೂಕಿನಲ್ಲಿ ಸೆಸ್ಕ್‌ನ ಎರಡು ವಿಭಾಗಳು ಕಾರ್ಯನಿರ್ವಹಿಸುತ್ತಿವೆ.ರಾಮನಾಥಪುರ ವಿಭಾಗದಲ್ಲಿ 31ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗೃಹಜ್ಯೋತಿ ಫಲಾನುಭವಿಗಳು ಇದ್ದು, ಇದುವರೆಗೂ 19 ಕೋಟಿ ರೂ. ಸಹಾಯ ಧನ ನೀಡಲಾಗಿದೆ. ಅದೇ ರೀತಿ ಅರಕಲಗೂಡು ವಿಭಾಗದಲ್ಲಿ 24ಸಾವಿರಮಂದಿ ಫಲಾನುಭವಿಗಳಿದ್ದು, 14 ಕೋಟಿ ರೂ.ಸಹಾಯಧನ ದೊರೆತಿದೆ. ಒಟ್ಟು ಎರಡು ವಿಭಾಗಗಳಿಂದ 33 ಕೋಟಿ ರೂ. ಸಹಾಯ ಧನ ತಾಲೂಕಿಗೆ ದೊರೆತಂತಾಗಿದೆ ಎಂದರು.

ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯ 51 ಸಾವಿರ ಫಲಾನುಭವಿಗಳಿದ್ದು, 10 ಕೋಟಿ ರೂ.ಪ್ರತಿ ತಿಂಗಳು ನೇರವಾಗಿ ಅವರ ಖಾತೆಗೆ ಜಮಾ ಆಗುತ್ತಿದೆ. ಕೆಲವು ತಾಂತ್ರಿಕ ಕಾರಣಗಳಿಂದ 408ಮಂದಿಗೆ ಸೌಕರ್ಯ ಸಿಕ್ಕಿಲ್ಲ. ಈ ಪೈಕಿ ನೈಜ ಫಲಾನುಭವಿಗಳನ್ನ ಆಯ್ಕೆಮಾಡಿ ಅವರಿಗೂ ಸವಲತ್ತು ಸಿಗುವಂತೆ ಕಾರ್ಯನಿರ್ವಹಿಸಬೇಕೆಂದು ಸಿಡಿಪಿಒ ವೆಂಕಟೇಶ್ ಅವರಿಗೆ ತಿಳಿಸಿದರು.

ತಾಲೂಕಿನಲ್ಲಿ ಒಟ್ಟು 57,269ಮಂದಿ ಬಿಪಿಎಲ್, ಎಪಿಎಲ್ ಮತ್ತು ಅತ್ಯೋದಯ ಫಲಾನುಭವಿಗಳಿದ್ದಾರೆ. ಈ ಪೈಕಿ 3151 ಮಂದಿ ಅಂತ್ಯೋದಯ, 50,493 ಮಂದಿ ಬಿಪಿಎಲ್ ಮತ್ತು 3613 ಮಂದಿ ಎಪಿಎಲ್ ಕಾರ್ಡ್‌ದಾರರು ಇದ್ದಾರೆ. ಪ್ರತಿ ತಿಂಗಳು 18 ಸಾವಿರದ 75 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಬಿಪಿಎಲ್ ಫಲಾನುಭವಿಗಳಿಗೆ ತಲಾ 10 ಕೆ.ಜಿ. ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರಿಗೆ ಯಾವುದೇ ಅಕ್ಕಿ ವಿತರಣೆ ಇಲ್ಲ.ಹೊಸದಾಗಿ ಪಡಿತರ ಕಾರ್ಡ್‌ಗಾಗಿ 1875 ಮಂದಿ ಅರ್ಜಿ ಸಲ್ಲಿಸಿದ್ದಾರೆ. 290 ಅನರ್ಹಗೊಂಡಿವೆ.

1337ಮಂದಿ ಹೊಸದಾಗಿ ಅರ್ಜಿ ವಿತರಣೆ ಮಾಡಲಾಗಿದೆ.ಬಾಕಿ 246 ಇವೆ. ಸರ್ಕಾರಿ ನಿಯಮಾನುಸಾರ ಅರ್ಹ ಫಲಾನುಭವಿಗಳಿಗೆ ಕಾರ್ಡ್ ನೀಡಿ ಅನ್ನಭಾಗ್ಯ ಯೋಜನೆಯ ಸವಲತ್ತು ಪಡೆಯಲು ಆಹಾರ ಇಲಾಖೆ ಅಧಿಕಾರಿ ಗಮನಹರಿಸಬೇಕೆಂದು ಸೂಚನೆ ನೀಡಿದರು. ತಹಸೀಲ್ದಾರ್ ಸೌಮ್ಯಾ, ತಾಪಂ ಇಒ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net