ಶೇ.60ರಷ್ಟು ಕನ್ನಡ ನಾಮಫಲಕ ಕಡ್ಡಾಯಕ್ಕೆ ಒತ್ತಾಯ

13blrp3
Published on

ಬೇಲೂರು: ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಪ್ರತಿಯೊಂದು ವ್ಯಾಪಾರಿಕ ಸಂಸ್ಥೆ, ಹೋಟೆಲ್, ಶಾಲೆ, ಕಚೇರಿ ಹಾಗೂ ಜಾಹೀರಾತು ಫಲಕಗಳಲ್ಲಿ ಶೇ.60 ರಷ್ಟು ಕಡ್ಡಾಯವಾಗಿ ಕನ್ನಡ ಬಳಸಲು ಪುರಸಭೆಯಿಂದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರವೇ(ನಾರಾಯಣಗೌಡ)ಬಣದ ಮುಖಂಡರು ಪುರಸಭೆ ಅಧ್ಯಕ್ಷೆ ಉಷಾ ಸತೀಶ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ಕರವೇ(ನಾರಾಯಣಗೌಡ)ಬಣದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಪಟ್ಟಣದಲ್ಲಿ ಅಳವಡಿಸಿರುವ ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಶೇ.60 ರಷ್ಟು ಕಡ್ಡಾಯವಾಗಿ ಕನ್ನಡ ಬಳಸಲು ಕ್ರಮ ಕೈಗೊಳ್ಳಬೇಕೆಂದು ಸಾಕಷ್ಟು ವರ್ಷಗಳಿಂದ ಪುರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸುತಿದ್ದೇವೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಇದೇ ನ.1 ರೊಳಗೆ ಪಟ್ಟಣದ ಎಲ್ಲ ನಾಮಫಲಕಗಳು ಹಾಗೂ ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡದಲ್ಲಿರಬೇಕು. ಇಲ್ಲದಿದ್ದಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನೇರ ಹೋರಾಟದೊಂದಿಗೆ ಮಸಿ ಬಳಿಯುವ ಕೆಲಸ ಆರಂಭಿಸಲಿದೆ. ಆಗ ಉಂಟಾಗುವ ಯಾವುದೇ ಅಹಿತಕರ ಘಟನೆಗಳಿಗೆ ಪುರಸಭೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ನ.1 ಕನ್ನಡ ರಾಜ್ಯೋತ್ಸವದೊಳಗೆ ಪಟ್ಟಣದಲ್ಲಿರುವ ಎಲ್ಲ ವ್ಯಾಪಾರಿಕ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯವಾಗಲಿದೆ. ಆದೇಶ ಪಾಲನೆಯಾಗದಿದ್ದರೆ ಪುರಸಭೆ ಸ್ವತಃ ನಾಮಫಲಕಗಳನ್ನು ತೆರವುಗೊಳಿಸಲಿದೆ ಎಂದರು.

ಪುರಸಭೆ ಸದಸ್ಯರಾದ ಜಮೀಲಾ ತೌಫಿಕ್, ಪ್ರಭಾಕರ್, ಮೀನಾಕ್ಷಿ, ಕರವೇ ತಾಲೂಕು ಗೌರವಾಧ್ಯಕ್ಷ ತಾರಾನಾಥ್ ಮಳೆಗೆರೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಚಂದ್ರೇಗೌಡ, ಯುವ ಘಟಕದ ಅಧ್ಯಕ್ಷ ಮೋಹನ್‌ಗೌಡ, ಕಪಾಲಿ ರಾಜಶೇಖರ್, ಗಂಗರಾಜು, ದೇವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net