ಶೇ.48ರಷ್ಟು ಹದಿಹರೆಯದವರಲ್ಲಿ ಏಡ್ಸ್

nrp aids
ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಏಡ್ಸ್ ಜಾಗೃತಿ ಮತ್ತು ಭಿತ್ತಿಪತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಡಾ. ಧನಂಜಯ್, ಡಾ. ವಿನಯ್, ಪಿ.ಪಿ.ಬೇಬಿ, ವಿಶ್ವನಾಥ್, ಪ್ರಸಾದ್, ಸವಿತಾ ಇತರರಿದ್ದರು.
Published on

ಎನ್.ಆರ್.ಪುರ: ಶಿಕ್ಷಣ, ಜಾಗೃತಿ ಮೂಲಕ ಮಾತ್ರ ಏಡ್ಸ್ ನಿರ್ಮೂಲನೆ ಮಾಡಲು ಸಾಧ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಹೇಳಿದರು.

ಗುರುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ನಡೆದ ಏಡ್ಸ್ ಕುರಿತು ಜಾಗೃತಿ ಮತ್ತು ಭಿತ್ತಿಪತ್ರ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ರೆಡ್ ರಿಬ್ಬನ್ ಕ್ಲಬ್ ಏಡ್ಸ್ ಕುರಿತು ಅರಿವು ಮೂಡಿಸಲು ಪ್ರಾಶಸ್ತ್ಯ ನೀಡಿದೆ. ಹದಿಹರೆಯದವರಲ್ಲಿ ಏಡ್ಸ್ ಕುರಿತು ಅರಿವು ಮೂಡಿಸುವುದು, ರಕ್ತದಾನದ ಮಹತ್ವ ತಿಳಿಸುವುದು ಪ್ರಮುಖ ಉದ್ದೇಶ ಎಂದರು.

ಏಡ್ಸ್ ಶೇ.84 ರಷ್ಟು ಮಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಬರುತ್ತದೆ. ಎಚ್‌ಐವಿ ಸೋಂಕಿತರಿಂದ ರಕ್ತ ಪಡೆಯುವುದರಿಂದ, ಸೂಜಿ, ಸಿರಂಜ್‌ನಿಂದ ಎಚ್‌ಐವಿ ಪೀಡಿತ ತಾಯಿಯಿಂದ ಮಗುವಿಗೆ ಏಡ್ಸ್ ಬರುವ ಸಾಧ್ಯತೆ ಹೆಚ್ಚಿದೆ. ದೇಶದ ಒಟ್ಟು ಯುವ ಜನಸಂಖ್ಯೆಯಲ್ಲಿ ಶೇ.48ರಷ್ಟು ಹದಿಹರೆಯದವರಲ್ಲಿ ಏಡ್ಸ್ ಇದೆ. ಎನ್.ಆರ್.ಪುರ ತಾಲೂಕಿನಲ್ಲಿ 105 ಎಚ್‌ಐವಿ ಪ್ರಕರಣಗಳಿದ್ದು 7 ಜನರು ಮರಣ ಹೊಂದಿದ್ದಾರೆ. ಉಳಿದವರು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಗರ್ಭಧರಿಸುವ ಪ್ರಮಾಣ ಹೆಚ್ಚಾಗುತ್ತಿದೆ. ತಾಲೂಕಿನಲ್ಲೂ ಹಲವು ಪ್ರಕರಣಗಳು ಕಂಡುಬಂದಿವೆ. ಯುವಜನಾಂಗ ನೈತಿಕತೆ ಬೆಳೆಸಿಕೊಳ್ಳುವ ಮೂಲಕ ವಿವಾಹಪೂರ್ವ ಲೈಂಗಿಕ ಸಂಪರ್ಕ ಮಾಡಬಾರದು ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಧನಂಜಯ ಮಾತನಾಡಿ, ಆರೋಗ್ಯವಂತ ಯುವಜನಾಂಗ ಇದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಯುವ ಜನಾಂಗ ದುಶ್ಚಟ, ಏಡ್ಸ್, ಕ್ಯಾನ್ಸರ್‌ನಂಥ ಮಾರಕ ರೋಗಗಳಿಗೆ ಬಲಿಯಾಗುತ್ತಿರುವುದು ದುರಂತ. ಹಣ, ಹೆಸರು ಗಳಿಸಬಹುದು. ಆದರೆ ಉತ್ತಮ ಆರೋಗ್ಯಗಳಿಸಲು ಸಾಧ್ಯವಿಲ್ಲ. ಯುವಜನಾಂಗ, ನೈತಿಕತೆ, ಸತ್ಯ, ಪ್ರಾಮಾಣಿಕತೆ, ಉತ್ತಮ ಜೀವನ ಶೈಲಿ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಎಸ್.ಸೃಷ್ಠಿ ಪ್ರಥಮ, ಬಿ.ಆರ್.ಸ್ಫೂರ್ತಿ ದ್ವಿತೀಯ, ಗಾನವಿ ತೃತೀಯ ನಗದು ಬಹುಮಾನ ವಿತರಿಸಲಾಯಿತು. ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ವಿನಯ್, ವಿಶ್ವನಾಥ್, ಮೇರಿ, ಪ್ರಸಾದ್, ಸವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net