ಶೇ.40ರಷ್ಟು ಕಮಿಷನ್: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

siddaramaiah
Published on

ಮೈಸೂರು: ಗುತ್ತಿಗೆದಾರರ ಸಂಘ ಮಾಡಿರುವ ಶೇ. 40ರಷ್ಟು ಕಮಿಷನ್ ಆರೋಪದ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ಆಗಬೇಕೆಂದು ಆಗ್ರಹಿಸಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತನಿಖೆ ನಡೆಸಲು ಸರ್ಕಾರಕ್ಕಿರುವ ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ನಾವು ಪ್ರಾಮಾಣಿಕರು, ಯಾವ ಸಚಿವರು ನಯಾಪೈಸೆ ಲಂಚ ಪಡೆದಿಲ್ಲ ಎಂದು ಹೇಳುವ ಬಿಜೆಪಿ ನಾಯಕರು, ಸಚಿವರು, ಮುಖ್ಯಮಂತ್ರಿ ಅವರು ನ್ಯಾಯಾಂಗ ತನಿಖೆಗೆ ಏಕೆ ಒಪ್ಪುತ್ತಿಲ್ಲ? ದಾಖಲೆ ಕೊಡಲಿ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಸಾಮಾನ್ಯವಾಗಿ ಕಮಿಷನ್ ಅಥವಾ ಲಂಚ ಪಡೆಯುವ ವೇಳೆ ಯಾವ ದಾಖಲೆಗಳು ಇರಲ್ಲ ಎಂದರು.

ಸಿದ್ದರಾಮಯ್ಯ ಹರಿಶ್ಚಂದ್ರನೇ ಎಂದು ಪ್ರಶ್ನೆ ಮಾಡುತ್ತಾರೆ. ನನ್ನನ್ನು ನಾನು ಯಾವತ್ತೂ ಹರಿಶ್ಚಂದ್ರನ ವಂಶದವನು ಎಂದು ಹೇಳಿಕೊಂಡಿಲ್ಲ. ನಮ್ಮ ಕಾಲದಲ್ಲೂ ಹಗರಣ ಆಗಿದೆ ಎನ್ನುತ್ತಾರೆ. ಆಗ ನಾನು 5 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆ. ಇವರೂ ಸಿಬಿಐಗೆ ಕೊಡಲಿ. ನಮ್ಮ ಕಾಲದಲ್ಲಿ ಹಗರಣ ನಡೆದಿದ್ದರೆ ಅದನ್ನೂ ಸೇರಿಸಿ ತನಿಖೆಗೆ ಒಪ್ಪಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಪ್ರದರ್ಶನ ಮಾಡಬಾರದು ಎಂದು ಕುಟುಕಿದರು.

ಭ್ರಷ್ಟಾಚಾರ ಮುಗಿಲು ಮುಟ್ಟಿದೆ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ರಾಜ್ಯದ ಜನರು ಮಾತನಾಡುತ್ತಿದ್ದಾರೆ. ವಿಧಾನಸೌಧದ ಗೋಡೆಗಳು ಹೇಳುತ್ತಿವೆ. ಅಧಿಕಾರಿಗಳು, ರಾಜ್ಯ ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು 2ನೇ ಬಾರಿ ಮಾಧ್ಯಮದ ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಪತ್ರ ಬರೆದು ವರ್ಷ ಆದರೂ ಪ್ರಧಾನಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಎಸಿಬಿ ದಾಳಿ ವೇಳೆ ಸಿಕ್ಕು ಜೈಲು ಪಾಲಾಗಿದ್ದ ಅಧಿಕಾರಿಯನ್ನು ಮತ್ತೆ ಅದೇ ಸ್ಥಳಕ್ಕೆ ವರ್ಗಾವಣೆ ಮಾಡಿಸಲು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರು 2.5 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚೆಂಗಪ್ಪ ಆರೋಪಿಸಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಎಂದು ಪ್ರಶ್ನಿಸಿದರು.

ಎಲ್ಲ ನೇಮಕಾತಿಗಳಲ್ಲೂ ಅಕ್ರಮ
ಪಿಎಸ್‌ಐ, ಹಲವು ವಿಶ್ವವಿದ್ಯಾಲಯಗಳು, ಕೆಇಬಿ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ವರ್ಗಾವಣೆ ಪ್ರಕ್ರಿಯೆಗೆ ಹೋಟೆಲ್ ತಿಂಡಿಯ ಹಾಗೆ ಬೆಲೆ ನಿಗದಿ ಮಾಡಿದ್ದಾರೆ. ಎಸ್‌ಪಿಯಿಂದ ಹಿಡಿದು ಪೇದೆಗಳವರೆಗೆ ಒಂದೊಂದು ಬೆಲೆ ನಿಗದಿ ಮಾಡಿದ್ದಾರೆ. ವರ್ಗಾವಣೆಯಾದ ಒಂದು ವರ್ಷದಲ್ಲಿ ಎಷ್ಟಾದರೂ ಹಣ ಹೊಡೆಯಿರಿ ಅಂಥ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

ಸರ್ಕಾರವೇ ಭ್ರಷ್ಟವಾಗಿದ್ದರೆ ಭ್ರಷ್ಟರ ಮೇಲೆ ಕ್ರಮಕೈಗೊಳ್ಳಲ್ಲ. ಈಶ್ವರಪ್ಪ ಅವರ ಮೇಲಿನ ಆರೋಪದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಈ ರೀತಿ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ನಡೆಯಬಾರದು. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಗೌರವ ಇಲ್ಲ. ಜನಾಭಿಪ್ರಾಯದ ಚಿಂತೆಯೂ ಇಲ್ಲ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರುವವರಿಗೆ ಈ ಬಗ್ಗೆ ಯಾವ ಚಿಂತೆಯೂ ಇರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೇ.10ರಷ್ಟು ಭರವಸೆಯನ್ನೂ ಈಡೇರಿಸಿಲ್ಲ:
ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ಅವರ ಪ್ರಣಾಳಿಕೆಯಲ್ಲಿದ್ದ ಶೇ.10ರಷ್ಟು ಭರವಸೆಯನ್ನೂ ಈಡೇರಿಸಿಲ್ಲ. ಈ ವಿಚಾರದಲ್ಲಿ ಬಿಜೆಪಿಯೊಂದಿಗೆ ಚರ್ಚೆಗೆ ಸಿದ್ಧ ಎಂದರು.

ಬಿಜೆಪಿಯ ಭರವಸೆಗಳನ್ನು ಈಡೇರಿಸಲು ದುಡ್ಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ 1 ಲಕ್ಷದ ವರೆಗಿನ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ, ರೈತರ ಬೆಳೆಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಲೆ ಕೊಡುತ್ತೇವೆ. ಬಾಕಿ ಇರುವ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು 5 ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದಿದ್ದರು. ಯಾವುದನ್ನೂ ಮಾಡಲಿಲ್ಲ. ಬಿಜೆಪಿಯ ಶೇ.90ಕ್ಕೂ ಅಧಿಕ ಭರವಸೆಗಳು ಈಡೇರದೆ ಹಾಗೆಯೇ ಉಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಹಸಿವಿನ ವಿರೋಧಿಗಳು
‘ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬಡವರಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸುತ್ತೇವೆ’ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇದಕ್ಕೆ ಎರಡು ಕಾರಣ ಇರಬಹುದು. ಅಕ್ಕಿ ಕೊಡಲು ದುಡ್ಡಿಲ್ಲ ಅಥವಾ ಹಸಿದವರು ಮತ್ತು ಬಡವರ ಮೇಲೆ ವಿರೋಧ ಇರಬಹುದು ಎಂದು ಕುಟುಕಿದರು.

ಪ್ರತಾಪ್ ಸಿಂಹ ಯಕಶ್ಚಿತ್ ರಾಜಕಾರಣಿ
ಸಂಸದ ಪ್ರತಾಪ್ ಸಿಂಹನಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಅವನೊಬ್ಬ ಯಕಶ್ಚಿತ್ ರಾಜಕಾರಣಿ ಎಂದು ಸಿದ್ದರಾಮಯ್ಯ ಜರಿದರು.
ನಾನು ಮುಖ್ಯಮಂತ್ರಿಯಾಗಿ 5 ವರ್ಷಗಳಲ್ಲಿ ಮೈಸೂರು ನಗರಕ್ಕೆ ಏನು ಮಾಡಿದ್ದೇನೆ, ಪ್ರತಾಪ್ ಸಿಂಹ ಸಂಸದರಾಗಿ ಏನು ಮಾಡಿದ್ದಾರೆ ಎಂಬ ಬಗ್ಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಜತೆ ಚರ್ಚೆ ಮಾಡಿ ನಂತರ ನನ್ನ ಬಳಿ ಬರಲಿ ಎಂದು ಸವಾಲು ಹಾಕಿದರು.
ಮಹಾರಾಣಿ ಕಾಲೇಜು, ಜಿಲ್ಲಾಸ್ಪತ್ರೆ, ಜಯದೇವ ಆಸ್ಪತ್ರೆ, ಟ್ರಾಮಾ, ಹೆರಿಗೆ ಆಸ್ಪತ್ರೆ, ಜಯಚಾಮರಾಜೇಂದ್ರ ಪ್ರತಿಮೆ ನಿರ್ಮಾಣ ಮಾಡಿದ್ದು ಯಾರು? ಈ ಪ್ರತಾಪ್ ಸಿಂಹನಾ ಎಂದು ಪ್ರಶ್ನಿಸಿದರು.

ಸರ್ಕಾರ ಸತ್ತು ಹೋಗಿದೆ. ಕೆಟ್ಟು ನಿಂತಿದೆ. ಇದೇ ಕಾರಣಕ್ಕೆ ಸಚಿವ ಮಾಧುಸ್ವಾಮಿ ‘ರಾಜ್ಯದಲ್ಲಿ ಸರ್ಕಾರ ಇಲ್ಲ, ಸುಮ್ಮನೆ ತಳ್ಳಿಕೊಂಡು ಹೋಗುತ್ತಿದ್ದೇವೆ’ ಎಂದಿದ್ದಾರೆ. ಇಂಥ ವಿಚಾರಗಳನ್ನು ನಾನು ಮಾತನಾಡಿದರೆ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು, ಸಾವರ್ಕರ್‌ಗೆ ಅವಮಾನ ಮಾಡಿದರು ಎಂದು ಹೇಳಿ ಧರ್ಮ, ಜಾತಿ ವಿಚಾರಗಳಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯಲು ನೋಡುತ್ತಾರೆ.-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net