

ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯ ಸರ್ಕಾರದ ವಿರುದ್ಧ ಶೇ.40 ರಷ್ಟು ಕಮಿಷನ್ ಪಡೆದಿರುವ ಆರೋಪದ ಕುರಿತು ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿ, ಮಂತ್ರಿ ಇರಲಿ, ಅಧಿಕಾರಿ ಇರಲಿ, ಯಾರೇ ಇದ್ದರೂ ಕ್ರಮ ಖಚಿತ ಎಂದು ಸಚಿವ ಉಮೇಶ ಕತ್ತಿ ಹೇಳಿದರು.
ಗದಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ದಾಖಲೆಗಳನ್ನು ಒದಗಿಸಿದರೆ ಕ್ರಮಕೈಗೊಳ್ಳಲು ಸರ್ಕಾರ ಹಿಂಜರಿಯಲ್ಲ. ಆರೋಪ ಮಾಡಿರುವ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಸಿದ್ದರಾಮಯ್ಯನವರ ಶಿಷ್ಯ. ಕಾಂಗ್ರೆಸ್ನವರಿಗೆ ಕೆಲಸವಿಲ್ಲದ್ದರಿಂದ ಇಂತಹ ಕೆಲಸ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ಮಾಡಲು ಕೆಲಸವಿಲ್ಲ, ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಸರ್ಕಾರ ತಪ್ಪು ದಾರಿಯಲ್ಲಿ ಹೋದರೆ ಸರಿದಾರಿಗೆ ತರುವ ಕೆಲಸ ಮಾಡಲಿ, ಅದನ್ನು ಬಿಟ್ಟು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಬಾರದು ಎಂದರು.
ವೀರ ಸಾವರ್ಕರ್ ಸ್ವಾತಂತ್ರ್ಯ ಯೋಧರು. ದೇಶವನ್ನು ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದವರು. ಅಂಡಮಾನ್ನಲ್ಲಿ ಕಾಲಾಪಾನಿ ಶಿಕ್ಷೆ ಅನುಭವಿಸಿದವರು. ಇದು ಗೊತ್ತಾದ ಮೇಲೆಯೂ ಇದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಉಮೇಶ ಕತ್ತಿ ಹೇಳಿದರು.
ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಉಮೇಶ ಕತ್ತಿ, ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದು, ಅವರದ್ದೇ ಆದ ಚಿಂತನೆಯಿದೆ. ಅವರಿಗೆ ನಾವು ಸಲಹೆ ಸೂಚನೆಗಳನ್ನು ಕೊಟ್ಟಿದ್ದೇವೆ ಎಂದರು.
ಸಿದ್ದರಾಮಯ್ಯ ಅವರು ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಅಂತಾರೆ. ನಾವು ಹತ್ತು ಕೆಜಿ ಅಕ್ಕಿ, ಎರಡು ಕೆಜಿ ರಾಗಿ, ಒಂದು ಕೆಜಿ ಜೋಳ ಕೊಡುತ್ತಿದ್ದೇವೆ ಎಂದರು.
ನಸೀಬಿದ್ದರೆ ನಾನೂ ಸಿಎಂ ಆಗ್ತೀನಿ
ಹೈಕಮಾಂಡ್ ಅವಕಾಶ ಕೊಟ್ಟರೆ ಅಖಂಡ ಕರ್ನಾಟಕದ ಸಿಎಂ ಆಗ್ತೀನಿ ಎಂದು ಸಚಿವ ಉಮೇಶ ಕತ್ತಿ ಹೇಳಿದರು. ‘ನಸೀಬು ಇದ್ದರೆ ನಾನೂ ಸಿಎಂ ಆಗೇ ಆಗ್ತಿನಿ. ಬಸವರಾಜ ಬೊಮ್ಮಾಯಿ ಅವರನ್ನು ಕೆಳಗಿಳಿಸಿ ಸಿಎಂ ಆಗಲು ಸಿದ್ಧನಿಲ್ಲ. ಸಿಎಂ ಸ್ಥಾನಕ್ಕೆ ಬೆನ್ನು ಹತ್ತಲ್ಲ. ಒಂಬತ್ತು ಬಾರಿ ಶಾಸಕನಾಗಿದ್ದೇನೆ. ಎಂಟು ಇಲಾಖೆ ನಿಭಾಯಿಸಿದ್ದೇನೆ. ರಾಜ್ಯದ ಹಿರಿಯ ರಾಜಕಾರಣಿ ನಾನು’ ಎಂದರು.