ಶೇ.28ರಷ್ಟು ಕಡಿಮೆ ಪ್ರಮಾಣದ ಮಳೆ

hnp agri
Published on

ಹೊಳೆನರಸೀಪುರ: ತಾಲೂಕಿನಲ್ಲಿ ಶೇ.28ರಷ್ಟು ಕಡಿಮೆ ಪ್ರಮಾಣದ ಮಳೆಯಾಗಿದೆ. ಇದರ ಪರಿಣಾಮ ಪೂರ್ವ ಮುಂಗಾರಿನ ಬೆಳೆಗಳು ಒಣಗುವ ಹಂತ ತಲುಪಿವೆ. ಈ ವಾರದಲ್ಲಿ ಸಾಕಷ್ಟು ಮಳೆಯಾಗದಿದ್ದರೆ ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾಳಾಗುವ ಸಂಭವ ಹೆಚ್ಚಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಎಚ್.ಕೆ.ಸ್ವಪ್ನಾ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಪೂರ್ವ ಮುಂಗಾರು ಹಂಗಾಮ ಏಪ್ರಿಲ್ ತಿಂಗಳಿಂದ ಪ್ರಾರಂಭವಾಗಿದ್ದು ಜೂನ್ ವರೆಗೂ ವಾಡಿಕೆ ಮಳೆ 198.6 ಎಂಎಂ ಮಳೆಯಾಗಬೇಕಿತ್ತು, ಪ್ರಸ್ತುತ 144.4 ಎಂಎಂ ಮಳೆಯಾಗಿದೆ. ಶೇಕಡ 28ರಷ್ಟು ಮಳೆಯ ಕೊರತೆಯಾಗಿದೆ. ಜೂನ್ 1ರಿಂದ 12 ರವರೆಗೆ ಶೇ.34 ಎಂಎಂ ಮಳೆಯಾಗಬೇಕಾಗಿದ್ದು, ಕೇವಲ 4 ಎಂಎಂ ಮಳೆ ಬಂದಿದ್ದು, ಜೂನ್‌ನಲ್ಲಿ ಶೇ.88ರಷ್ಟು ಮಳೆ ಕಡಿಮೆಯಾಗಿದೆ. ಪ್ರಮುಖವಾಗಿ ಪೂರ್ವ ಮುಂಗಾರಿನಲ್ಲಿ ತಂಬಾಕು 1705 ಹೆಕ್ಟೇರ್, ಅಲಸಂದೆ 825 ಹೆ, ಮುಸುಕಿನಜೋಳ ನೀರಾವರಿ ಪ್ರದೇಶದಲ್ಲಿ 1350 ಹೆ, ಮಳೆಯಾಶ್ರಿತ ಪ್ರದೇಶದಲ್ಲಿ 990 ಹೆ, ಕಬ್ಬು 500 ಹೆ, ಹೆಸರು 22 ಹೆ,ಉದ್ದು 24 ಹೆ, ಎಳ್ಳು 54 ಹೆ ತೊಗರಿ 13 ಹೆಕ್ಟೇರ್ ಬಿತ್ತನೆಯಾಗಿದ್ದು, ಒಟ್ಟಾರೆಯಾಗಿ 5750 ಹೆಕ್ಟೇರ್ ಬಿತ್ತನೆಯಾಗಿದ್ದು, ಎಲ್ಲ ಬೆಳೆಗಳು ಬೆಳವಣಿಗೆ ಹಂತದಲ್ಲಿವೆ ಎಂದು ತಿಳಿಸಿದರು.

ಪರಿಕರ ಮಾರಾಟಗಾರರ ಸಭೆ ನಡೆಸಿ ರಸ ಗೊಬ್ಬರಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡುವಂತೆ ಹಾಗೂ ಯಾವುದೇ ಕೃತಕ ಅಭಾವ ಸೃಷ್ಟಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ರೈತರಿಗೆ ಯಾವುದೇ ರೀತಿಯಲ್ಲಿ ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಹಳ್ಳಿ ಮೈಸೂರ್, ಹಳೇಕೋಟೆ ಮತ್ತು ಕಸಬಾ ಸೇರಿದಂತೆ ಮೂರು ರೈತ ಸಂಪರ್ಕ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೆ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ತೊಗರಿ, ಹಲಸಂದೆ, ಹೆಸರು ಕಾಳು, ಉದ್ದು ದಾಸ್ತಾನು ಮಾಡಲಾಗಿದೆ. ರೈತರು ಇದರ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಾರ್ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಬಿತ್ತನೆ ಬೀಜ, ಕೀಟನಾಶಕ, ಲಘು ಪೋಷಕಾಂಶ, ಟಾರ್ಪಲ್, ಕೃಷಿ ಯಂತ್ರೋಪಕರಣ ಇತ್ಯಾದಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಬಾರ್ ಕೋಡ್ ಹಾಗೂ ಕ್ಯೂಆರ್ ಕೋಡ್ ಬಳಕೆಯಾಗಲಿದೆ. ಸರಬರಾಜುದಾರದಿಂದ ರೈತ ಸಂಪರ್ಕ ಕೇಂದ್ರಕ್ಕೆ ಬರುವ ಕೃಷಿ ಪರಿಕರಗಳನ್ನು ಸ್ವೀಕರಿಸಲಾಗುತ್ತದೆ. ಇದರಿಂದ ಫಲಾನುಭವಿಗಳಿಗೆ ಪರಿಕರ ವಿತರಿಸುವಾಗಲೂ ಅದರ ಮೂಲಕವೇ ವಿತರಿಸಲಾಗುತ್ತದೆ ಎಂಬ ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸವಲತ್ತು ಪಡೆಯಲು ಇಕೆವೈಸಿ ಕಡ್ಡಾಯವಾಗಿದೆ. ತಾಲೂಕಿನಲ್ಲಿ 8,000ಕ್ಕೂ ಅಧಿಕ ರೈತರು ಇಲ್ಲಿಯವರೆಗೆ ಕೆವೈ ಸಿ ಮಾಡಿಸಿಲ್ಲ. ಈಗಾಗಲೇ 13 ಕಂತಿನ ಹಣ ಪಾವತಿ ಮಾಡಲಾಗಿದ್ದು, 14ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಇಕೆವೈಸಿ ಕಡ್ಡಾಯವಾಗಿದೆ. ಇಕೆವೈಸಿ ಮಾಡಿಸಲು ಜೂನ್ 30 ಕಡೆಯ ದಿನವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net