ಶೇ.1 ಒಳಮೀಸಲಾತಿ ನೀಡಲಿ

01-stbr-hdl--01
Published on

ಹೂವಿನಹಡಗಲಿ: ಸ್ಪಶ್ಯ ಸಮುದಾಯಗಳಾದ ಭೋವಿ, ಲಂಬಾಣಿ, ಕುಳವ ಸಮುದಾಯಗಳೊಂದಿಗೆ ಅಲೆಮಾರಿ ಸಮುದಾಯಗಳನ್ನು ಸೇರ್ಪಡೆ ಮಾಡಿ ಮೀಸಲಾತಿ ಕಲ್ಪಿಸಲಾಗಿದೆ. ಅಸ್ಪಶ್ಯರಾಗಿರುವ ಅಲೆಮಾರಿ ಸಮುದಾಯಗಳಿಗೆ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ಶಿಫಾರಸ್ಸಿನಂತೆ ಶೇ.1 ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಒಳಮೀಸಲಾತಿ ವಂಚಿತ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮಲ್ಲಿಕಾರ್ಜುನಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಬುಡ್ಗ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ಯಡವಲಿ ಮಾತನಾಡಿ, ನಮಗೆ ಒಳಮೀಸಲಾತಿಯನ್ನು ನೀಡಬೇಕೆಂದು ಮೂರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರ ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸಿಲ್ಲ. ಅನೇಕ ವರ್ಷಗಳಿಂದ ಗುಡಿಸಲುಗಳಲ್ಲಿ ವಾಸಮಾಡುತ್ತಿರುವ ಹಾಗೂ ಶಿಕ್ಷಣದಿಂದ ವಂಚಿತರಾಗಿರುವ ಅಲೆಮಾರಿ ಜನಾಂಗದವರಿಗೆ ಒಳಮೀಸಲಾತಿಯಲ್ಲಿ ಶೇ.1 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಚನ್ನದಾಸರ ಸಮಾಜದ ತಾಲೂಕು ಅಧ್ಯಕ್ಷ ಅಂಜಿನಪ್ಪ ದಾಸರ ಮಾತನಾಡಿ, ಜನಪ್ರತಿನಿಧಿಗಳು ಒಳಮೀಸಲಾತಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಬಲಾಢ್ಯ ಸಮುದಾಯಗಳೊಂದಿಗೆ ಅಲೆಮಾರಿ ಸಮುದಾಯಗಳನ್ನು ಸೇರಿಸುವುದರಿಂದ ಮೀಸಲಾತಿಯಿಂದ ವಂಚಿತರಾಗುವ ಹಾಗೂ ಇತರ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಂತಾಗುತ್ತದೆ. ಸರ್ಕಾರ ಅಲೆಮಾರಿ ಜನಾಂಗದವರಿಗೆ ಸೂಕ್ತ ಮೀಸಲಾತಿ ನೀಡಲಿ ಎಂದು ಒತ್ತಾಯಿಸಿದರು.

ಸಿಂಧೊಳ್ಳು ಸಮಾಜದ ತಾಲೂಕು ಉಪಾಧ್ಯಕ್ಷ ಸಿ.ಹನುಮಂತಪ್ಪ ಮಾತನಾಡಿ, ಸರ್ಕಾರ ಸಾಮಾಜಿಕ ನ್ಯಾಯದಡಿ ಅಲೆಮಾರಿ ಜನಾಂಗದವರಿಗೆ ಮೀಸಲಾತಿ ಒದಗಿಸಲಿ ಎಂದು ಆಗ್ರಹಿಸಿದರು.

ಸಿಂಧೊಳ್ಳು ಸಮಾಜದ ತಾಲೂಕು ಅಧ್ಯಕ್ಷ ಗಿಡ್ಡಪ್ಪ, ಗೋಸಂಗಿ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ, ಸಂಘಟನಾ ಕಾರ್ಯದರ್ಶಿಗಳಾದ ಪೃಥ್ವಿರಾಜು, ರತ್ನಜಿ, ಶಿಳ್ಳೆಕ್ಯಾತ ಸಮಾಜದ ತಾಲೂಕು ಸಂಚಾಲಕ ಪರಶುರಾಮ ಅಂಗೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net