ಶೆಟಲ್ ಬ್ಯಾಡ್ಮಿಂಟನ್ ಟೂರ್ನಿ 12ಕ್ಕೆ

sport
Published on

ಬೀದರ್: ದಿ. ಸಂಜಯಕುಮಾರ ದುಬಲಗುಂಡೆ ಅವರ ಎರಡನೇ ಸ್ಮರಣಾರ್ಥ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಡಿ. 12, 13 ರಂದು ಇಲ್ಲಿನ ನೆಹರು ಕ್ರೀಡಾಂಗಣ ಎದುರಿನ ಒಳಾಂಗಣ ಕ್ರೀಡಾಂಗಣದಲ್ಲಿ ಅಂತಾರಾಜ್ಯ ಮುಕ್ತ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ.

ಎರಡು ದಿನದ ಈ ಪಂದ್ಯಾವಳಿಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಪಾಲ್ಗೊಳ್ಳಯತ್ತಿದ್ದಾರೆ. ಮಹಿಳೆಯರು-ಪುರುಷರು, ಬಾಲಕ-ಬಾಲಕಿಯರು, ಸಿಂಗಲ್ಸ್-ಡಬಲ್ಸ್ ಹೀಗೆ ಭಿನ್ನ ವಿಯೋಮಾನದವರ ವಿವಿಧ ವಿಭಾಗಗಳಲ್ಲಿ ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿ ಸೇರಿದಂತೆ ಒಟ್ಟು 1 ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ. ಪಂದ್ಯಾವಳಿಗಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಬ್ಯಾಡ್ಮಿಂಟನ್ ಅಸೋಶಿಯೇಷನ್ ಕಾರ್ಯದರ್ಶಿ ಪ್ರಕಾಶ ಭೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಅಧ್ಯಕ್ಷರಾದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರ ಅಧ್ಯಕ್ಷತೆ, ಉಸ್ತುವಾರಿಯಲ್ಲಿ ಎರಡನೇ ವರ್ಷವೂ ಪಂದ್ಯಾವಳಿ ಸಂಘಟಿಸಲಾಗಿದೆ. 12ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಸಂಸದ ಭಗವಂತ ಖೂಬಾ, ಶಾಸಕ ರಹೀಮ್ ಖಾನ್, ಬಿಡಿಎ ಅಧ್ಯಕ್ಷ ಬಾಬು ವಾಲಿ, ಡಿಸಿ ರಾಮಚಂದ್ರನ್, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಡಾ. ಮಕ್ಸೂದ್ ಚಂದಾ, ಡಾ. ಶಿವಶಂಕರ ಭತಮುರ್ಗೆ ಇತರರು ಭಾಗವಹಿಸುವರು ಎಂದು ವಿವರಿಸಿದ್ದಾರೆ.

ಪುರುಷರ ಸಿಂಗಲ್ ಮತ್ತು ಡಬಲ್ಸ್, 40 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್, 16 ಮತ್ತು 19 ವರ್ಷದೊಳಗಿನ ಬಾಲಕರಿಗಾಗಿ ಸಿಂಗಲ್ಸ್, 19 ವರ್ಷದೊಳಗಿನ ಬಾಲಕಿಯರಿಗಾಗಿ ಡಬಲ್ಸ್ ಪಂದ್ಯಾವಳಿ ನಡೆಯಲಿವೆ. ಕರೊನಾ ಹಿನ್ನೆಲೆಯಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳು, ಪ್ರೇಕ್ಷಕರು, ಸಂಘಟಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳು 9449034923/ 9783041345/ 9448678108/ 7899227703ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net