

ಶೃಂಗೇರಿ: ತಾಲೂಕಿನ ಬಹುತೇಕ ಕಡೆ ಬುಧವಾರ ಉತ್ತರಭಾದ್ರ ಮಳೆಯಾಗಿದ್ದು, ಮಧ್ಯಾಹ್ನ ಕೆಲವೆಡೆ ಬಿರುಸಿನ ಮಳೆಯಾಗಿದ್ದರೆ ಕೆಲವೆಡೆ ಸಾಮಾನ್ಯ ಮಳೆಯಾಗಿದೆ.
ಮಂಗಳವಾರ ತೆಕ್ಕೂರು ಭಾಗದಲ್ಲಿ ಸಾಮಾನ್ಯ ಮಳೆಯಾಗಿದ್ದು, ಬುಧವಾರವೂ ಮಳೆಯಾಗಿದೆ. ಪಟ್ಟಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಅಡ್ಡಗದ್ದೆ, ನೆಮ್ಮಾರ್ ಭಾಗದಲ್ಲಿ ಸಾಮಾನ್ಯ ಮಳೆಯಾಗಿದ್ದರೆ, ಮೆಣಸೆ, ಮಸಿಗೆ, ಕುಂಚೆಬೈಲು, ಶಿಡ್ಲೆ ಮುಂತಾದೆಡೆ ಧಾರಾಕಾರ ಮಳೆಯಾಗಿದೆ. ಮಳೆಯೊಂದಿಗೆ ಗುಡುಗು ಆರ್ಭಟಿಸಿದ್ದು, ಬಿಸಿಲಿನಿಂದ ಕಾದಿದ್ದ ಭೂಮಿಗೆ ತಂಪೆರೆದಿದೆ. ಜನವರಿಯಲ್ಲಿ ಒಮ್ಮೆ ಮಳೆಯಾಗಿದ್ದನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ವರ್ಷಾಧಾರೆಯಾಗಿದೆ. ದಿಢೀರ್ ಮಳೆಯಿಂದ ಪಟ್ಟಣದಲ್ಲಿ ದ್ವಿಚಕ್ರ ಮತ್ತು ಪಾದಚಾರಿಗಳ ಸಂಚಾರ ಸ್ಥಬ್ಧವಾಗಿತ್ತು. ಸಂತೆ ಮಾರುಕಟ್ಟೆ ಬಳಿ ಆಟೋ ನಿಲ್ದಾಣಕ್ಕೆ ಮಳೆಯ ನೀರು ನುಗ್ಗಿತ್ತು. ಕೊಪ್ಪ ತಾಲೂಕಿನಲ್ಲೂ ಮಳೆಯಾಗಿದೆ.