ಶೃಂಗೇರಿಯಲ್ಲಿ ಗೂಡಂಗಡಿಗಳ ತೆರವು

ckm teravu
ಶೃಂಗೇರಿ ಗಾಂಧಿ ಮೈದಾನದಲ್ಲಿ ಪೊಲೀಸ್ ಭದ್ರತೆಯಲ್ಲಿ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಯಿತು.
Published on

ಶೃಂಗೇರಿ: ಶ್ರೀ ಶಾರದಾ ಮಠದ ತುಂಗಾ ನದಿ ತೀರದಲ್ಲಿ ಒಂಬತ್ತು ಗೂಡಂಗಡಿಗಳನ್ನು ಜಿಲ್ಲಾಡಳಿತ ಮಂಗಳವಾರ ತೆರವುಗೊಳಿಸಿದೆ. ಮಠದ ಭಕ್ತರ ವಾಹನಗಳ ಪಾರ್ಕಿಂಗ್ ಪ್ರದೇಶವಾಗಿರುವ ಗಾಂಧಿ ಮೈದಾನದ ತುಂಗಾ ನದಿ ತೀರದಲ್ಲಿ ಗೂಡಂಗಡಿ ಹಾಕಿ ವ್ಯಾಪಾರ ಮಾಡಿ ಮೂರ್ನಾಲ್ಕು ದಶಕಗಳಿಂದ ಬದುಕು ನಡೆಸುತ್ತಿದ್ದ ಒಂಬತ್ತು ಕುಟುಂಬಗಳಿಗೆ ಉದ್ಯೋಗ ಇಲ್ಲದಂತಾಗಿದೆ.

ನದಿ ಕರಾಬು ಎಂಬ ಕಾರಣ ನೀಡಿ ಚಿಕ್ಕಮಗಳೂರು ಜಿಲ್ಲಾಡಳಿತ ಗೂಡಂಗಡಿಗಳನ್ನು ತೆರವು ಮಾಡಿದೆ. ಕಳೆದ ವರ್ಷ ಅಂಗಡಿಗಳ ತೆರವು ಮಾಡಲು ಮುಂದಾದ ಜಿಲ್ಲಾಡಳಿತದ ನಡೆ ವಿರುದ್ಧ ಗೂಡಂಗಡಿ ಮಾಲೀಕರು ಹೈಕೋರ್ಟ್ ಮೊರೆಹೋಗಿ ತಡೆಯಾಜ್ಞೆ ತಂದಿದ್ದರು. ಆದರೆ ಮಂಗಳವಾರ ಜಿಲ್ಲಾಡಳಿತ ತೆರವು ಮಾಡಿರುವ 9 ಅಂಗಡಿಗಳ ಮಾಲೀಕರು ಹಣದ ಕೊರತೆಯಿಂದ ಹೈಕೋರ್ಟ್ ನಲ್ಲಿ ಸ್ಟೇ ತರಲು ಸಾಧ್ಯವಾಗಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಡ ಚಿಕ್ಕಮಗಳೂರು ಜಿಲ್ಲಾಡಳಿತ ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ ಬಳಸಿ ಏಕಾಏಕಿ ತೆರವುಮಾಡಿದೆ. ಜಿಲ್ಲಾಡಳಿತದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಗಾಂಧಿ ಮೈದಾನದಲ್ಲಿ ಇರುವ ಗೂಡಂಗಡಿ ಮೇಲೆ ಚಿಕ್ಕಮಗಳೂರು ಜಿಲ್ಲಾಡಳಿತ ತೋರುತ್ತಿರುವ ಕರಾಬು ಭೂಮಿ ತೆರವು ಕಾರ್ಯಾಚರಣೆ ಎಂಬ ಅಸ್ತ್ರವನ್ನು ಶೃಂಗೇರಿ ಪಟ್ಟಣದ ತುಂಗಾ ನದಿ ತೀರದಲ್ಲಿ ತಲೆ ಎತ್ತಿರುವ ಕಟ್ಟಡ, ಹೋಟೆಲ್, ಲಾಡ್ಜ್ ಗಳ ಮೇಲೆ ಕ್ರಮ ಯಾಕಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕಿದರು ಎಂಬ ಕಾರಣದಿಂದಾಗಿ ಗೂಡಂಗಡಿ ತೆರವು ಮಾಡುವಂತೆ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತಕ್ಕೆ ಒತ್ತಡ ಹಾಕಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net