

ಶೃಂಗೇರಿ: ದೀಪಾವಳಿ ಹಬ್ಬದ ಪ್ರಯುಕ್ತ ಶನಿವಾರ ರಂಗವಲ್ಲಿ ಚಿತ್ತಾರ ಬಿಡಿಸಿ, ತಳಿರು ತೋರಣ ಕಟ್ಟಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಾಲೂಕಿನ ಜನರು ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಿದರು.
ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು. ಜಾನುವಾರು ಕೊಟ್ಟಿಗೆಗೆ ಬಾಳೆಮರ, ಹೂಗಳನ್ನು ಕಟ್ಟಿ ಗೋವುಗಳಿಗೆ ಹಣ್ಣಡಿಕೆ, ಪಚ್ಚೆತೆನೆ, ಕಾಡುಕಿತ್ತಳೆ, ವೀಳ್ಯದೆಲೆ, ನಾಲ್ಕು ಚಪ್ಪೆರೊಟ್ಟಿ ಇತ್ಯಾದಿಗಳನ್ನು ಒಳಗೊಂಡ ಹಾರವನ್ನು ಹಾಕಿ ಗೋವುಗಳಿಗೆ ಪೂಜೆ ಸಲ್ಲಿಸಿದರು. ಸಂಜೆ ಕೊಟ್ಟಿಗೆಗೆ ಬಂದ ಗೋವುಗಳಿಗೆ ಮತ್ತೆ ಪೂಜೆ ನೆರವೇರಿಸಿದರು. ಮನೆಯಂಗಳದ ಸುತ್ತಮುತ್ತ ಹಣತೆ ಹಚ್ಚಿ, ಪಟಾಕಿ ಸಿಡಿಸಿದರು. ಸಂಜೆ ಜಮೀನಿನಲ್ಲಿ ದೀಪ ಹಚ್ಚಿದರು. ಹೊಸ ಭತ್ತದ ಅಕ್ಕಿ ಬಿಡಿಸಿ ಹಾಲು ಹಾಕಿ ಬೇಯಿಸಿ ತುಪ್ಪ, ಸಕ್ಕರೆ, ಗೋಡಂಬಿ, ಏಲಕ್ಕಿಪುಡಿ ಹಾಕಿ ಹೊಸತು ಹಬ್ಬ ಕೂಡ ಹಲವೆಡೆ ಆಚರಿಸಿದರು. ಶೃಂಗೇರಿ ಶ್ರೀ ಶಾರದಾಪೀಠದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದರು. ಬಳಿಕ ಶ್ರೀ ಶಾರದಾಂಬಾ, ಶ್ರೀ ಸುಬ್ರಹ್ಮಣ್ಯ, ತೋರಣಗಣಪತಿ, ಶ್ರೀ ವಿದ್ಯಾಶಂಕರ ದೇವಾಲಯಗಳಲ್ಲಿ ಪೂಜೆಯಲ್ಲಿ ಭಾಗಿಯಾದರು. ಸಂಜೆ ಶ್ರೀ ಶಾರದಾಂಬಾ ದೇವಾಲಯದಲ್ಲಿ ಬಲೀಂದ್ರಪೂಜೆ, ಮಹಾರಾಜರ ಕಾಣಿಕೆ ಸಮರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು.