

ಗೌರಿಬಿದನೂರು : ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಶೂನ್ಯ ಬಡ್ಡಿದರ ಸಾಲ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಮಾಡಿರುವ ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು, ಆಡಳಿತ ಮಂಡಳಿಯನ್ನು ವಜಾಗೊಳಿಸಿ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೆಜಿಎ್, ಚಿಂತಾಮಣಿ, ಬಂಗಾರಪೇಟೆ ತಾಲೂಕುಗಳಲ್ಲಿ ಸಂಘ ಇಲ್ಲದಿದ್ದರೂ ಸಾಲ ವಿತರಣೆ ಮಾಡಿದ್ದಾರೆ ಎಂದು ಬುಧವಾರ ಗೌರಿಬಿದನೂರಿನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸ್ತ್ರೀಶಕ್ತಿ ಸಂಘಗಳಿಗೆ ಬ್ಯಾಂಕ್ ಮೂಲಕ ನೀಡುವ ಸಾಲವನ್ನು ಫಲಾನುಭವಿಗಳಿಗೆ ಏಕಕಾಲದಲ್ಲಿ ನೀಡದೆ ಕಂತುಗಳ ರೂಪದಲ್ಲಿ ನೀಡಲಾಗುತ್ತಿದೆ. ಬ್ಯಾಂಕ್‌ನಲ್ಲಿ ಖಾತೆ ತೆರೆದು ವ್ಯವಹರಿಸುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಮರ್ಪಕವಾಗಿ ಹಣ ನೀಡುತ್ತಿಲ್ಲ ಎಂದು ದೂರಿದ ಕಾಂತರಾಜು, ಅಕ್ರಮಗಳಲ್ಲಿ ತೊಡಗಿರುವ ಆಡಳಿತ ಮಂಡಳಿಯನ್ನು ಸಹಕಾರಿ ಸಂಘದ ನಿಬಂಧನೆ 29ಸಿ ಅಡಿ ವಜಾಗೊಳಿಸಿ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸೀಶಕ್ತಿ ಸಂಘಗಳಿಂದ ವಂತಿಗೆ ಹಣ ಪಡೆದು 8 ತಿಂಗಳಾದರೂ ಸಾಲ ನೀಡಿಲ್ಲ, ಬದಲಿಗೆ ಬೇರೆ ಸಂಘಗಳಿಗೆ ಸಾಲ ವಿತರಣೆ ಮಾಡಲಾಗುತ್ತಿದ್ದು, ಡಿಸಿಸಿ ಬ್ಯಾಂಕ್‌ನಲ್ಲಿ ಆಗಿರುವ ಭ್ರಷ್ಟಾಚಾರದ ಹಣವನ್ನು ಶಾಸಕರು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಗರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಎಂ.ನರಸಿಂಹಮೂರ್ತಿ ದೂರಿದರು.ಮುಖಂಡರಾದ ಬಸಪ್ಪರೆಡ್ಡಿ, ಅಬ್ದುಲ್ಲಾ, ವೆಂಕಟರಾಮರೆಡ್ಡಿ, ನಾಗಾರ್ಜುನ, ಪವನ್‌ರೆಡ್ಡಿ, ಶ್ರೀನಿವಾಸಗೌಡ ಇತರರಿದ್ದರು.
ತಡೆಯಾಜ್ಞೆ ತಂದಿದ್ದು ಏಕೆ? : ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಗೊವಿಂದಗೌಡ ಹಾಗೂ ಶಾಸಕರು ಹೇಳುತ್ತಾರೆ. ಆದರೆ ಅಕ್ರಮಗಳ ತನಿಖೆಗೆ ಆದೇಶಿಸಿದಾಗ ಇವರೇ ತಡೆಯಾಜ್ಞೆ ತರುತ್ತಾರೆ. ಅಕ್ರಮವೇ ನಡೆಯದಿದ್ದರೆ ತನಿಖೆಗೆ ತಡೆಯಾಜ್ಞೆ ತಂದಿದ್ದಾರೂ ಏಕೆ? ಎಂದು ಅಲಕಾಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ಪಿ.ಗೋಪಾಲಗೌಡ ಪ್ರಶ್ನಿಸಿದರು.
ಶಾಸಕರನ್ನು ಬೆಂಬಲಿಸಿ ಪ್ರಚಾರ : ಸಹಕಾರಿ ಸಂಘದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಆದರೆ ಅಧ್ಯಕ್ಷ ಗೋವಿಂಡಗೌಡ ಸಾಲ ವಿತರಣೆಯಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರನ್ನು ಬೆಂಬಲಿಸಿ ಮುಂದಿನ ಚುನಾವಣೆಗೆ ಪ್ರಚಾರ ಮಾಡುತ್ತಿದ್ದಾರೆ. ಶಾಸಕರನ್ನು ಮತ್ತೆ ಗೆಲ್ಲಿಸಿದರೆ 1 ಲಕ್ಷ ರೂ.ವರೆಗೂ ಸಾಲ ವಿಸ್ತರಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಅರ್ಹ ಸೇವಾ ಸಹಕಾರ ಸಂಘಗಳಿಗೆ ಸಾಲ ನೀಡದೆ ಕಾಂಗ್ರೆಸ್ ಬೆಂಬಲಿತರು ಆಡಳಿತದಲ್ಲಿರುವ ಸಂಘಗಳಿಗೆ ಮಾತ್ರ ನೀಡಲಾಗುತ್ತಿದೆ ಎಂದು ಆರ್.ಪಿ.ಗೋಪಾಲಗೌಡ ಆರೋಪಿಸಿದರು.