ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 96 ಲಕ್ಷ ರೂ. ಸಾಲ

1000730970
Published on

ಹಿರೀಸಾವೆ: ಕೇವಲ 10 ಗುಂಟೆ ಕೃಷಿ ಜಮೀನು ಹೊಂದಿರುವ ರೈತನಿಗೂ ಸಾಲದ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಷೇರುದಾರ ಸದಸ್ಯರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ, ರೈತರ ಬದುಕು ಹಸನುಗೊಂಡು ಸದೃಢಗೊಳ್ಳುವಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ದಿಡಗ ಸಂಘದಿಂದ ಪ್ರಸ್ತುತ ಸಾಲಿನಲ್ಲಿ 300 ಷೇರುದಾರ ರೈತ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ 96 ಲಕ್ಷ ರೂ. ಸಾಲ ನೀಡಲಾಗಿದೆ. ಈ ಮೊದಲು 50ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸುಮಾರು 2 ಕೋಟಿ ರೂ.ಗೂ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಾವು ಎಂದಿಗೂ ಕೈಕಟ್ಟಿ ಕೂರುವವರಲ್ಲ. ತಾಲೂಕನ್ನು ಸಂಪೂರ್ಣ ನೀರಾವರಿಗೊಳಿಸುವ ಆಶಯ ಹೊಂದಿದ್ದು, ಪರಿಶ್ರಮದ ಫಲವಾಗಿ ಕಳೆದ 2-3 ವರ್ಷಗಳಿಂದ ಹಿರೀಸಾವೆ-ಜುಟ್ಟನಹಳ್ಳಿ, ನುಗ್ಗೇಹಳ್ಳಿ, ಕಲ್ಲೇಸೋಮನಹಳ್ಳಿ, ಸಂತೇಶಿವರ ಹಾಗೂ ನವಿಲೆ ಏತನೀರಾವರಿ ಯೋಜನೆಗಳ ಮೂಲಕ 150ಕ್ಕೂ ಹೆಚ್ಚು ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗಿದೆ ಎಂದರು.

ಇದರಿಂದ ವ್ಯಾಪ್ತಿಯಲ್ಲಿ ಅಂತರ್ಜಲ ಚೇತರಿಕೆ ಕಂಡಿದ್ದು, ಕೊಳವೆಬಾವಿಗಳಲ್ಲಿ ಮೇಲೆಯೇ ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಅಲ್ಲದೆ ಜನ-ಜಾನುವಾರುಗಳು ಕುಡಿಯಲು ನೀರು ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕನಸಿನ ಯೋಜನೆಯಾದ ತೋಟಿಕೆರೆ ಏತನೀರಾವರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಈ ಹಂಗಾಮಿನ ಅಂತಿಮ ವೇಳೆಯಷ್ಟರಲ್ಲಿ ಪ್ರಾಯೋಗಿಕವಾಗಿ ತೋಟಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೆ ದಿಡಗ ಏತ ನೀರಾರಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಪ್ರಸ್ತಾವನೆಯ ಹಂತದಲ್ಲಿದೆ. ರಾಜ್ಯ ಸರ್ಕಾರ ಮನಸ್ಸು ಮಾಡಿ ಅನುಮೋದನೆ ನೀಡಿದರೆ ಮುಂದಿನ ವರ್ಷದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ನರಿಹಳ್ಳಿ ತಾತೇಗೌಡ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಂಘದ ನಿರ್ದೇಶಕರ ಸಹಕಾರ ಪಡೆದು ಸಂಘದ ಹಾಗೂ ಷೇರುದಾರ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ತಾ.ಪಂ. ಮಾಜಿ ಸದಸ್ಯರಾದ ಪುಟ್ಟರಾಜು, ಎಂ.ಆರ್.ವಾಸು, ಎಪಿಎಂಸಿ ಮಾಜಿ ಅಧ್ಯಕ್ಷ ರಘುರಾಮ್, ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಮ್, ಸಂಘದ ಮಾಜಿ ಅಧ್ಯಕ್ಷ ಶ್ರೀಕಂಠಪ್ಪ, ನಿರ್ದೇಶಕರಾದ ಮಲ್ಲೇಗೌಡ, ಎಚ್.ಕೆ.ಯೋಗೇಶ್, ಬಾಲಕೃಷ್ಣ, ಎಚ್.ಕೆ.ಮಹೇಶ್, ಲೋಕೇಶ್, ವೆಂಕಟೇಶ್, ತುಮಕೂರು ಮಧು, ಸುಮಿತ್ರಮ್ಮ, ತುಳಸಿ, ಅಭಿಲಾಶ್, ಕಾರ್ಯನಿರ್ವಹಕಾಧಿಕಾರಿ ನಿಂಗಮ್ಮ, ಸಿಬ್ಬಂದಿ, ಸದಸ್ಯರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net