

ಚಾಮರಾಜನಗರ: ನೂರಾರು ಸಿನಿಮಾಗಳ ಚಿತ್ರೀಕರಣ ನಡೆದಿರುವ ಮಂಡ್ಯ ಜಿಲ್ಲೆಯ ಕಾವೇರಿ ನದಿ ತಟದ ಗ್ರಾಮ ಮಹದೇವಪುರದಂತೆ ಗಡಿಜಿಲ್ಲೆ ಚಾಮರಾಜನಗರದ ಹಳ್ಳಿಯೊಂದು ಶೂಟಿಂಗ್ ಸ್ಪಾಟ್ ಆಗಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ.
‘ಶೂಟಿಂಗ್ ಮಹದೇವಪುರ’ ಎಂದೇ ಖ್ಯಾತಿಯಾಗಿರುವ ಶ್ರೀರಂಗಪಟ್ಟಣ ತಾಲೂಕಿನ ಸುಂದರ ಹಳ್ಳಿಲೋಕ ವರನಟ ಡಾ.ರಾಜ್‌ಕುಮಾರ್ ಅವರ ಚಿತ್ರಗಳಿಂದ ಹಿಡಿದು ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಲ್ಲೂ ಚಿತ್ರೀಕರಣಗೊಂಡಿದೆ. ಇದೇ ರೀತಿ ಚಾಮರಾಜನಗರ ತಾಲೂಕಿನ ‘ಕೊತ್ತಲವಾಡಿ’ ಗ್ರಾಮವೂ ಸಿನಿಮಾ ಶೂಟಿಂಗ್‌ಗೆ ಹೇಳಿ ಮಾಡಿಸಿದ ಜಾಗವಾಗಿ ಚಿತ್ರತಂಡಗಳನ್ನು ಸೆಳೆಯುತ್ತಿದೆ. ಈಗಾಗಲೇ ಅಭಿನಯ ಚತುರ ಕ್ವಾಟ್ಲೆ ಸತೀಶ್ ಅಭಿನಯದ ಅಶೋಕ ಬ್ಲೇಡ್ ಚಿತ್ರದ ಚಿತ್ರೀಕರಣವಾಗಿದೆ. ಅಲ್ಲದೆ, ಕೊತ್ತಲವಾಡಿ ಹೆಸರಿನಲ್ಲೇ ಸಿನಿಮಾ ಸಿದ್ಧವಾಗುತ್ತಿರುವುದು ವಿಶೇಷ. ಐತಿಹಾಸಿಕ ಕಥೆಯುಳ್ಳ ತೆಲುಗು ಚಿತ್ರದ ಚಿತ್ರೀಕರಣ ಪ್ರಸ್ತುತ ಭರದಿಂದ ಸಾಗುತ್ತಿದೆ.
ಯಶ್ ತಾಯಿ ನಿರ್ಮಾಣದ ಚಿತ್ರ:
ರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಲನಚಿತ್ರ ರಂಗದಲ್ಲಿ ಖ್ಯಾತ ನಟ. ಇವರ ತಾಯಿ ಪುಷ್ಪಾ ಅರುಣ್ ಕುಮಾರ್ ಸಿನಿಮಾ ನಿರ್ಮಾಣಕ್ಕಾಗಿ ಪಿಎ ಪ್ರೊಡಕ್ಷನ್ ಹೆಸರಿನಲ್ಲಿ ಹೊಸ ಸಂಸ್ಥೆ ಶುರು ಮಾಡಿದ್ದಾರೆ. ಈ ಸಂಸ್ಥೆಯ ಮೊದಲ ಸಿನಿಮಾದ ಹೆಸರೇ ‘ಕೊತ್ತಲವಾಡಿ’. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಹೆಸರನ್ನು ಸಿನಿಮಾಗೆ ಇಟ್ಟಿರುವುದು ಗ್ರಾಮಸ್ಥರ ಗಮನ ಸೆಳೆಯುತ್ತಿದೆ. ಇಷ್ಟು ದಿನ ಹಳ್ಳಿಯಲ್ಲಿ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ಆದರೀಗ ಸಿನಿಮಾಗೆ ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ನಿರ್ಮಾಣದ ಚಿತ್ರಕ್ಕೆ ಕೊತ್ತಲವಾಡಿ ಎಂದು ಹೆಸರಿಟ್ಟಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಚಿತ್ರಕ್ಕೆ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕರಾಗಿದ್ದು, ಇತ್ತೀಚಿಗೆ ಚಿತ್ರದ ಸ್ಟ್‌ಲುಕ್ ಮತ್ತು ಶೀರ್ಷಿಕೆ ಬಿಡುಗಡೆಯಾಗಿದೆ. ಕೆಲವು ದಿನಗಳ ಹಿಂದೆ ಕೊತ್ತಲವಾಡಿ ಗ್ರಾಮದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೂ ಕೊತ್ತಲವಾಡಿ ಗ್ರಾಮಕ್ಕೂ ಯಾವುದೇ ನಂಟಿಲ್ಲ. ಆದರೆ ಗ್ರಾಮದ ಹೆಸರೇ ಸಿನಿಮಾ ಶೀರ್ಷಿಕೆಯಾಗುವಂತೆ ಆಕರ್ಷಕವಾಗಿದೆ ಎನ್ನಲಾಗುತ್ತಿದೆ.
ಸಿನಿಮಾ ಸೆಟ್‌ನಂತಿರುವ ಹಳೆಯ ಮನೆಗಳು:
ಕೊತ್ತಲವಾಡಿ ಗ್ರಾಮವು ಸಿನಿಮಾದವರ ಸೆಳೆತಕ್ಕೆ ಒಳಗಾಗಲು ಹಲವು ಕಾರಣಗಳಿವೆ. ಗ್ರಾಮದಲ್ಲಿರುವ ಹಳೆಯ ಕಾಲದ ಮನೆಗಳು ಹಳ್ಳಿ ಸಂಸ್ಕೃತಿಯನ್ನು ಅನಾವರಣಗೊಳಿಸುವಂತಿವೆ. ಊರಿನ ಬೀದಿಯಲ್ಲಿರುವ ಹಳೆಯ ಕಾಲದ ಹೆಂಚಿನ ಮನೆಗಳು ಇಂದಿಗೂ ಗಟ್ಟಿ ಮುಟ್ಟಾಗಿವೆ. ಸುಣ್ಣ-ಬಣ್ಣ ಬಳಿದು ಅಚ್ಚುಕಟ್ಟಾಗಿ ಮನೆಗಳನ್ನು ಇಟ್ಟುಕೊಳ್ಳಲಾಗಿದೆ. ಮನೆಯ ಆವರಣದಲ್ಲಿ ಪಡಸಾಲೆಗಳು, ಓಣಿಯಂತಹ ರಸ್ತೆ, ಕಂಬಗಳಿಂದ ಕೂಡಿದ, ತೊಟ್ಟಿ ಮನೆಗಳು ಆಕರ್ಷಕವಾಗಿವೆ. ಸಿನಿಮಾದವರು ಸೆಟ್ ಹಾಕಿ ಶೂಟಿಂಗ್ ಮಾಡುವ ರೀತಿಯಲ್ಲೇ ಮನೆಗಳಿರುವುದು ವಿಶೇಷವಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರನಟ ಕ್ವಾಟ್ಲೆ ಸತೀಶ್ ಅವರ ಅಶೋಕ ಬ್ಲೇಡ್ ಚಿತ್ರದ ಚಿತ್ರೀಕರಣವನ್ನು ಇಲ್ಲೇ ಮಾಡಲಾಗಿತ್ತು. ಹಳೇ ಕಾಲದ ತೊಟ್ಟಿ ಮನೆಯಲ್ಲಿ ಶೂಟಿಂಗ್ ನಡೆದಿತ್ತು. 70ರ ದಶಕದ ಕಥಾಹಂದರವುಳ್ಳ ಈ ಚಿತ್ರಕ್ಕೆ ಕೊತ್ತಲವಾಡಿ ಗ್ರಾಮದ ವಾತಾವರಣ ಹೊಂದಿಕೆಯಾಗಿತ್ತು. ಅಲ್ಲದೇ, ಪ್ರಸ್ತುತ ಮತ್ತೊಂದು ಚಿತ್ರದ ಚಿತ್ರೀಕರಣ ಗ್ರಾಮದಲ್ಲಿ ನಡೆಯುತ್ತಿದೆ. ಮಾರಮ್ಮನದ ದೇವಸ್ಥಾನದ ಬಳಿ ಮತ್ತು ಕೆರೆಗಳ ರಸ್ತೆಯಲ್ಲಿರುವ ಪರಿಸರದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಒಂದರ ನಂತರ ಮತ್ತೊಂದು ಸಿನಿಮಾ ಶೂಟಿಂಗ್ ನಡೆಯುತ್ತಿರುವುದರಿಂದ ಗ್ರಾಮಸ್ಥರಿಗಿದು ಸಾಮಾನ್ಯವೆನಿಸುತ್ತಿದೆ. ಮುಂದಿನ ದಿನಗಳಲ್ಲಿ ಕೊತ್ತಲವಾಡಿ ಗ್ರಾಮ ಶ್ರೀರಂಗಪಟ್ಟಣದ ಮಹದೇವಪುರದಂತೆ ಆದರೂ ಆಶ್ಚರ್ಯವಿಲ್ಲ. ಇದು ಗ್ರಾಮದ ಪ್ರಸಿದ್ಧಿಗೆ ಅಡಿಪಾಯವಾಗುವುದರೊಂದಿಗೆ ಗ್ರಾಮಸ್ಥರಿಗೆ ಸ್ಥಳೀಯವಾಗಿ ಉದ್ಯೋಗ ಸಿಗುವಂತಾದರೆ ಒಳ್ಳೆಯ ಬೆಳವಣಿಗೆ.
ಚಿತ್ರೀಕರಣಕ್ಕೆ ಹೇಳಿಮಾಡಿಸಿದ ಜಿಲ್ಲೆ: ಚಾಮರಾಜನಗರ ಜಿಲ್ಲೆ ಪ್ರವಾಸಿ ತಾಣಗಳಿಗೆ ಹೆಸರುವಾಸಿ. ಪ್ರಾಕೃತಿಕ ಸಂಪತ್ತು, ಧಾರ್ಮಿಕ ಕೇಂದ್ರಗಳು, ಬೆಟ್ಟ-ಗುಡ್ಡಗಳು ಸುಂದರ ಪ್ರದೇಶಗಳಾಗಿವೆ. ಬಬ್ರುವಾಹನ ಚಿತ್ರದ ಚಿತ್ರೀಕರಣದಿಂದ ಹಿಡಿದು ಇತ್ತೀಚೆಗಿನ ಹಲವು ಚಿತ್ರಗಳ ಶೂಟಿಂಗ್ ನಡೆದಿವೆ. ಈ ನಾಡಿನ ದೈವ ಮಲೆ ಮಹದೇಶ್ವರರ ಸನ್ನಿಧಿಯಲ್ಲಿ ಅದೆಷ್ಟೋ ಸಿನಿಮಾಗಳ ಚಿತ್ರೀಕರಣಗಳು ನಡೆದಿವೆ. ಭಾಗಶಃ ಭೂ ಭಾಗವು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವುದರಿಂದ ಚಿತ್ರೀಕರಣ ನಡೆಸಲು ಅನುಮತಿ ಇಲ್ಲ. ಆದರೂ ಕೆಲವು ದಿನಗಳ ಹಿಂದೆ ಕೇರಳದ ಚಿತ್ರತಂಡವೊಂದು ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಚಿತ್ರದ ಶೂಟಿಂಗ್ ಮಾಡಿತ್ತು. ಇದಕ್ಕೆ ರೈತ ಸಂಘದ ಮುಖಂಡರು, ಪರಿಸರವಾದಿಗಳು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.
ಕೊತ್ತಲವಾಡಿಯಲ್ಲಿ ನಮ್ಮ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ. ಗ್ರಾಮ ತುಂಬ ಚೆನ್ನಾಗಿದೆ. ಊರ ಹೆಸರು ನಮಗೆ ತುಂಬ ಇಷ್ಟವಾಯಿತು. ಶೂಟಿಂಗ್ ಸಂದರ್ಭದಲ್ಲಿ ಗ್ರಾಮಸ್ಥರು ತುಂಬ ಸಹಕಾರ ನೀಡಿದರು. ಪೃಥ್ವಿ ಅಂಬಾರ್, ಕೊತ್ತಲವಾಡಿ ಚಿತ್ರದ ನಾಯಕ ನಮ್ಮೂರಿನ ಹಳೆಯ ಮನೆಗಳು, ಕೆರೆಯ ವಾತಾವರಣ ಚೆನ್ನಾಗಿದೆ. ಗ್ರಾಮೀಣ ಪ್ರದೇಶದ ಕಥೆಯನ್ನು ಹೊಂದಿರುವ ಚಿತ್ರಗಳ ಚಿತ್ರೀಕರಣ ನಡೆಯುತ್ತಿವೆ. ಸತೀಶ್, ಕೊತ್ತಲವಾಡಿ ಗ್ರಾಮಸ್ಥ