ಶುಲ್ಕ ಇಳಿಸಲು ಆಗ್ರಹಿಸಿ ಎಐಡಿಎಸ್‌ಒ ಪ್ರತಿಭಟನೆ

35
Published on

ಮೈಸೂರು: ಮಹಾರಾಜ ಕಾಲೇಜಿನ ಪ್ರವೇಶಾತಿ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಶುಲ್ಕ ಇಳಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೈಸೂರು ವಿಶ್ವವಿದ್ಯಾಲಯದ ಕ್ರಾರ್ಫಡ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಮಹಾರಾಜ ಕಾಲೇಜಿನ ಪ್ರವೇಶಾತಿ ಶುಲ್ಕ ಬೇರೆ ಕಾಲೇಜುಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಬಿಎ ಕೋರ್ಸ್‌ಗಳ ಶುಲ್ಕ 7500 ರೂ. ಇದೆ. ಆದರೆ ಕುವೆಂಪು ಪದವಿ ಕಾಲೇಜು, ಮಹಾರಾಣಿ ಕಾಲೇಜಿನಲ್ಲಿ ಅದೇ ಕೋರ್ಸ್ ಶುಲ್ಕ 4000 ರೂ. ಇದೆ. ಕಂಪ್ಯೂಟರ್ ಲ್ಯಾಬ್ ಶುಲ್ಕವೆಂದು ಹೆಚ್ಚುವರಿಯಾಗಿ 1200 ರೂ. ಪಡೆಯುತ್ತಿದ್ದು, 2 ವರ್ಷಗಳಲ್ಲಿ ಒಂದು ದಿನವೂ ಕಂಪ್ಯೂಟರ್ ತರಗತಿಗಳು ನಡೆದಿಲ್ಲ ಎಂದು ದೂರಿದರು.
ಯಾವ ಸಮುದಾಯದ ವಿದ್ಯಾರ್ಥಿಗಳಿಗೆ ಎಷ್ಟು ಶುಲ್ಕ ಎಂಬ ಮಾಹಿತಿಯನ್ನೂ ನೀಡುತ್ತಿಲ್ಲ. ಹೆಚ್ಚುವರಿಯಾಗಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಕಳೆದ 4 ಸೆಮಿಸ್ಟರ್ ಪರೀಕ್ಷೆ ಶುಲ್ಕ ಪಾವತಿಸಬೇಕೆಂದು ಹೇಳುತ್ತಿದ್ದಾರೆ. ಆದರೆ ಪರೀಕ್ಷಾ ಶುಲ್ಕ ಇಲ್ಲವೆಂದು ಹೇಳಲಾಗಿದೆ. ನಾಲ್ಕು ಸೆಮಿಸ್ಟರ್ ಪರೀಕ್ಷೆಗಳು ಮುಗಿದಿವೆ. ಇಂತಹ ಸಂದರ್ಭದಲ್ಲಿ ಶುಲ್ಕ ಕಟ್ಟಿಸಿಕೊಳ್ಳುವ ಅವಶ್ಯಕತೆಯಾದರು ಏನು ಎಂದು ಪ್ರಶ್ನಿಸಿದರು.
ಮಹಾರಾಜ ಕಾಲೇಜಿಗೆ ಬರುವವರು ಬಹುತೇಕ ಬಡ, ರೈತ, ಕೂಲಿಕಾರ್ಮಿಕರ ಮಕ್ಕಳು. ಹಾಗಾಗಿ ಶುಲ್ಕ ಏರಿಕೆ ಮಾಡಬಾರದು, ಕಳೆದ ಸಾಲಿನ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳಬಾರದು ಎಂದು ಅಗ್ರಹಿಸಿದರು.
ನಿರಂತರವಾಗಿ ಶುಲ್ಕ ಏರಿಕೆ ಮಾಡುತ್ತಿರುವುದು ವಿದ್ಯಾರ್ಥಿ, ಶಿಕ್ಷಣ ವಿರೋಧಿ ನಿಲುವು. ಆರ್ಥಿಕ ಬಿಕ್ಕಟ್ಟಿನ ಜತೆಗೆ, ಕೋರ್ಸ್‌ಗಳ ಶುಲ್ಕ ಹೆಚ್ಚಾಗುತ್ತಿರುವುದರಿಂದ ಉನ್ನತ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಿರುವಾಗ ನಿರಂತರವಾಗಿ ಶುಲ್ಕ ಏರಿಕೆ ಆಗುತ್ತಿದ್ದರೆ ಲಕ್ಷಾಂತರ ಬಡ ಕುಟುಂಬದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸನ್ನೇ ಕೈ ಬಿಡುವಂತಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಮೇಲೆ ಶುಲ್ಕ ಏರಿಕೆ ಭಾರ ಹೊರಿಸಬಾರದು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಮಹದೇವನ್ ಅವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಸುಭಾಷ್ ಬೆಟ್ಟದಕೊಪ್ಪ, ಪದಾಧಿಕಾರಿಗಳಾದ ನಿತಿನ್, ಅಭಿ, ಬಸವ, ವಿದ್ಯಾರ್ಥಿಗಳಾದ ಸಚಿನ್, ರವಿ, ಸುಮನ್, ಅಜಯ್, ರಘು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net