

ಬದಿಯಡ್ಕ: ವೇದವಿದ್ಯೆಯನ್ನು ಮುಂದಿನ ತಲೆಮಾರಿಗೆ ಒದಗಿಸಿಕೊಡುವ ಮಹತ್ತರ ಹೆಜ್ಜೆ ಇಟ್ಟು ಮುಂದುವರಿಯುತ್ತಿರುವ ಕಾರ್ಯಕ್ಕೆ ದೇವತಾನುಗ್ರಹ ಸದಾ ಇರಲಿ. ನೆನೆದ ಕಾರ್ಯ ನಡೆದು ಸುಂದರ ಭವ್ಯ ಕಟ್ಟಡ ಅತಿಶೀಘ್ರದಲ್ಲಿ ತಲೆಯೆತ್ತಲಿ. ವೇದ, ಬ್ರಾಹ್ಮಣ್ಯದ ಮೂಲಕ ಸನಾತನ ಪರಂಪರೆಗೆ ಭದ್ರವಾದ ಅಡಿಗಟ್ಟು ಲಭಿಸಲಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ನೀರ್ಚಾಲು ಕಾಂಚಿ ಚಂದ್ರಶೇಖರೇಂದ್ರ ಸರಸ್ವತೀ ವೇದಪಾಠಶಾಲೆ ವತಿಯಿಂದ ಕಿಳಿಂಗಾರಿನಲ್ಲಿ ನಿರ್ಮಾಣಗೊಳ್ಳಲಿರುವ ನೂತನ ವೇದಪಾಠ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.
ಅಮೈ ಅನಂತ ಕೃಷ್ಣ ಘನಪಾಠಿ, ಜಯರಾಮ ಕಾರಂತ, ಶಂಭು ಭಟ್ ಚಾವಡಿಬಾಗಿಲು ನೇತೃತ್ವದಲ್ಲಿ ಭೂಮಿಪೂಜೆ ನಡೆಯಿತು. ವಿಶ್ವೇಶ್ವರ ಭಟ್ ಪಳ್ಳತ್ತಡ್ಕ ಅವರ ಪತ್ನಿ ಜಗದಂಬಾ ಹಾಗೂ ಶಿಷ್ಯವೃಂದದವರು ಪಾಲ್ಗೊಂಡಿದ್ದರು. ವಾಸ್ತುತಜ್ಞ ಪ್ರಸನ್ನ ಮುಳಿಯಾಲ ಹಾಗೂ ಇಂಜಿನಿಯರ್ ಅಜಿತ್ ವಿ.ಶರ್ಮ ಮದನಗುಳಿ ಕುಂಬಳೆ ಅವರನ್ನು ಗೌರವಿಸಲಾಯಿತು. ಇತ್ತೀಚೆಗೆ ಇಹಲೋಕ ತ್ಯಜಿಸಿದ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ ಶಿಷ್ಯವೃಂದ ನೇತೃತ್ವದಲ್ಲಿ ನೂತನ ಕಟ್ಟಡ ನಿರ್ಮಾಣಕಾರ್ಯ ನಡೆಯಲಿದೆ.