ಶುದ್ಧ ಭಾಷೆ ಮಾತನಾಡಲು ಅಸಾಧ್ಯ, ಸಮ್ಮೇಳನಾಧ್ಯಕ್ಷ ರಾಂ.ಕೆ.ಹನುಮಂತಯ್ಯ ಅಭಿಮತ, ವಿಜಯಪುರದಲ್ಲಿ ಸಾಹಿತ್ಯ ಸಮ್ಮೇಳನ

vjp
Published on

ವಿಜಯಪುರ: ಕನ್ನಡ ಭಾಷೆ ಬಳಸುವಲ್ಲಿ ಅಭಿಮಾನ ಇರಲಿ. ಶುದ್ಧ ಮತ್ತು ಸ್ಪಷ್ಟತೆಯಿರಲಿ. ಆದರೆ ನುಡಿವಂತಿಕೆ ಬೇಡ. ಶುದ್ಧ ನೀರು ತಾ ಎಂದರೆ ತರಬಹುದು. ಆದರೆ ಶುದ್ಧ ಭಾಷೆ ನುಡಿ ಎಂದರೆ ಯಾವುದೇ ಭಾಷೆ ನುಡಿಯಲು ಅಸಾಧ್ಯ. ಇದು ಕನ್ನಡದ ಸಮಸ್ಯೆ ಅಲ್ಲ. ಜಗತ್ತಿನ ಎಲ್ಲ ಭಾಷೆಗಳ ಸಮಸ್ಯೆ ಎಂದು 24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ರಾಂ.ಕೆ.ಹನುಮಂತಯ್ಯ ತಿಳಿಸಿದರು.

ಪಟ್ಟಣದ ಅನ್ನಪೂರ್ಣೇಶ್ವರಿ ಕನ್ವೆನ್ಷನ್ ಹಾಲ್‌ನಲ್ಲಿ ಬೆಂ.ಗ್ರಾ.ಜಿಲ್ಲಾ ಕಸಾಪ ಮತ್ತು ಅಖಿಲ ಕರ್ನಾಟಕ ಮಿತ್ರ ಸಂಘದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ 24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ (ಅನುದಾನ ರಹಿತ), ಜಿಲ್ಲಾ ಉತ್ಸವ, ಅವಿಭಜಿತ ಬೆಂಗಳೂರು ಜಿಲ್ಲಾ ಯುವಬಾಲೆಯರ ನೃತ್ಯ ಸಮ್ಮೇಳನ, ವಿಜಯಪುರ ಮಾಜಿ ಪುರಸಭಾ ಅಧ್ಯಕ್ಷರಾದ ದಿವಂಗತ ವಿ.ಎಂ.ರುದ್ರಪ್ಪ ಮತ್ತು ಎ.ವಿ.ಚಿಕ್ಕಪ್ಪಯ್ಯಣ್ಣ ಅವರ 125ನೇ ಜನ್ಮ ದಿನೋತ್ಸವ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಂಡಿಗಾನಹಳ್ಳಿ ಚನ್ನಭೈರೇಗೌಡರ ಜನ್ಮಶತಮಾನೋತ್ಸವ, ವಿಜಯಪುರ ಪಟ್ಟಣದ ಐತಿಹಾಸಿಕ ರಂಗಕಲಾವಿದರಾದ ಎಂ.ವಿ.ನಾಯ್ಡು ಅವರ ಅಮೃತ ಜನ್ಮದಿನೋತ್ಸವ, ಕೇಂದ್ರ ಮಾಜಿ ಸಚಿವ ಜಿಲ್ಲಾ ಕುಂದಾಣ ಹೋಬಳಿ ಹೆಗ್ಗನಹಳ್ಳಿ ಪುತ್ರ ಅನಂತ್ ಕುಮಾರ್ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡದಲ್ಲಿ ಲಭ್ಯವಿರುವ ಭಾಷೆಯನ್ನು ಬಳಸಲಿಕ್ಕೆ ತೊಂದರೆ ಇಲ್ಲ. ಕನ್ನಡ ತಾಯಿಗೆ ಸಾವಿರ ತೋಳು ಎಂದುಕೊಳ್ಳೋಣ. ಆ ಸಾವಿರ ತೋಳುಗಳ ಒಂದೊಂದು ಬೆರಳುಗಳಿಗೆ ವಜ್ರದ ಉಂಗುರಗಳಿರುವಂತೆ ಕನ್ನಡದ ಭಾಷೆ ಎಂದು ತಿಳಿದುಕೊಂಡು, ಕನ್ನಡ ಭಾಷೆ ಅಷ್ಟು ಅಮೂಲ್ಯವೆಂದುಕೊಳ್ಳೋಣ ಎಂದರು.

ಶಿಕ್ಷಕನಾಗಬೇಕೆಂಬ ಆಸೆಯಿದ್ದ ನನಗೆ ಆರಕ್ಷಕನಾಗುವಂತಾಯಿತು. ಆದರೂ ಓದುವ ಹವ್ಯಾಸ, ಓದು ಹೆಚ್ಚಾದಂತೆ ಬರವಣಿಗೆಯೂ ಹೆಚ್ಚಾಯಿತು. ವೃತ್ತಿ ಅನ್ನ ನೀಡಿದರೆ, ಪ್ರವೃತ್ತಿ ಆನಂದ ನೀಡಿತು ಎಂದ ಹನುಮಂತಯ್ಯ ಅವರು, 600ಕ್ಕೂ ಹೆಚ್ಚು ಶಾಲಾ/ಕಾಲೇಜು, ಸಂಘ-ಸಂಸ್ಥೆಗಳು, ಸಾರ್ವಜನಿಕ ಸಮಾರಂಭಗಳಲ್ಲಿ 3 ಲಕ್ಷ ವಿದ್ಯಾರ್ಥಿಗಳು ಮತ್ತಿತರ ಸಾರ್ವಜನಿಕರಿಗೆ ಅಪರಾಧ ಹಾಗೂ ಸಂಚಾರ ನಿಯಮಗಳ ಅರಿವು ಮೂಡಿಸುವುದರೊಂದಿಗೆ ಅಭಿಮಾನ ಬೆಳೆಸುವಲ್ಲಿ ಯಶಸ್ವಿಯಾಗಿರುವನೆಂಬ ಸಮಾಧಾನ ಇದೆ ಎಂದರು.

ಸಮ್ಮೇಳನಾಧ್ಯಕ್ಷ ರಂಗಕಲಾವಿದ ಎಂ.ವಿ.ನಾಯ್ಡು ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕನಾಗಿ ವೃತ್ತಿ ಕೈಗೊಂಡರೂ, ಸಾವಿರಾರು ಮಂದಿಗೆ ಸಂಗೀತ ಹಾಗೂ ರಂಗಕಲೆ ಕಲಿಸಿದ್ದೇನೆ. ಅದರ ಆನಂದ ಅನುಭವಿಸಿದವರು ಹೆಚ್ಚಿದ್ದಾರೆ ಎಂದರು. ಭಜನೆಗಳ ಮೂಲಕ 1967ರಲ್ಲಿ ಸಂಗೀತ ಸೇವೆಯಲ್ಲಿ ತೊಡಗಿಕೊಂಡು, ಹತ್ತು-ಹಲವಾರು ಪೌರಾಣಿಕ, ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ, ಇದುವರೆಗೂ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳಲ್ಲಿ ಸಂಗೀತ ನೀಡಿದ್ದು, ನೂರಾರು ನಾಟಕಗಳನ್ನು ನಿರ್ದೇಶಿಸಿರುವುದಾಗಿ ತಿಳಿಸಿದರು.

ನೃತ್ಯ ಸಮ್ಮೇಳನಾ ಅಧ್ಯಕ್ಷೆ ಪೂಜಿತಾ ಭಾಸ್ಕರ್ ಮಾತನಾಡಿ, ನನ್ನಂತಹ ಕಿರಿಯ ಕಲಾವಿದರನ್ನು ಮಹಾನ್ ಸಾಧಕರ ಸಾಲಿನಲ್ಲಿ ಗುರುತಿಸಿ, ಗೌರವಿಸಿರುವುದು ನನಗೆ ಹೆಚ್ಚಿನ ಜವಾಬ್ದಾರಿ ಹೊರಿಸಿದಂತಾಗಿದೆ ಎಂದು ತಿಳಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಟೀಕೆ, ಟಿಪ್ಪಣಿಗಳಿಗೆ ಅಂಜದೆ, ಕನ್ನಡದ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಬಿ.ಚನ್ನಭೈರೇಗೌಡರ ಶತಮಾನೋತ್ಸವ ಪ್ರಶಸ್ತಿಯನ್ನು ಜಿಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ ಅವರಿಗೆ ವಿತರಿಸಲಾಯಿತು. ಕೇಂದ್ರ ಮಾಜಿ ಸಚಿವರಾದ ಅನಂತಕುಮಾರ್, ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ವಿ.ರುದ್ರಪ್ಪ ಹಾಗೂ ಎ.ವಿ.ಚಿಕ್ಕಪ್ಪಯ್ಯಣ್ಣ ಹೆಸರಿನಲ್ಲಿ ಸಮಾಜದಲ್ಲಿ ಉತ್ತಮ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಮಾಜಿ ಶಾಸಕ ಜಿ.ಚಂದ್ರಣ್ಣ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಶೇಖರ್ ಬಿ.ಹಡಪದ್, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡಾ.ಎಂ.ಶಿವಕುಮಾರ್, ಉಪಾಧ್ಯಕ್ಷರಾದ ಗೋವಿಂದರಾಜು, ಡಾ.ಶ್ರೀನಿವಾಸ್, ದೊಡ್ಡಬಳ್ಳಾಪುರ ತಾಲೂಕು ಕಸಾಪ ಅಧ್ಯಕ್ಷೆ ಪ್ರಮೀಳಾ ಮಹದೇವ್, ನೆಲಮಂಗಲ ತಾಲೂಕು ಕಸಾಪ ಅಧ್ಯಕ್ಷ ಕೇಶವಮೂರ್ತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುನೀತಾ ನಟರಾಜ್, ಜಿಲ್ಲಾ ಗೌರವ ಕೋಶಾಧ್ಯಕ್ಷ ಹೊನ್ನಶಾಮಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ವಿ.ಎನ್.ಸೂರ್ಯಪ್ರಕಾಶ್, ಟೌನ್ ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ ಮತ್ತಿತರರು ಭಾಗವಹಿಸಿದ್ದರು.

ರಾಷ್ಟ್ರ ಧ್ವಜಾರೋಹಣವನ್ನು ಹೊಸಕೋಟೆ ಡಾ.ಶ್ರೀನಿವಾಸ್, ನಾಡಧ್ವಜಾರೋಹಣವನ್ನು ದೇವನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಬಲಮುರಿ ಶ್ರೀನಿವಾಸ್, ಕಸಾಪ ಧ್ವಜಾರೋಹಣವನ್ನು ಹೊಸಕೋಟೆ ತಾಲೂಕು ಅಧ್ಯಕ್ಷ ಚೌಡೇಗೌಡ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net