ಶುದ್ಧ ನೀರಿನ ಘಟಕಗಳ ನಿರ್ವಹಣೆ ಯಾರದ್ದು?

CTD KDP
Published on

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ನಿರ್ವಹಣೆ, ದುರಸ್ತಿ ಹೊಣೆ ಕುರಿತಂತೆ ಬುಧವಾರ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಆರ್‌ಒಗಳ ದುರಸ್ತಿ, ನಿರ್ವಹಣೆ ಯಾರಿಗೆ ಸೇರಿದ್ದೆಂದು ಶಾಸಕ ಟಿ.ರಘುಮೂರ್ತಿ ಪ್ರಶ್ನೀಸಿದರು.
ಜಿಲ್ಲಾದ್ಯಂತ 114 ಆರ್‌ಒ ಘಟಕಗಳು ಕೆಟ್ಟಿವೆ ಎಂಬ ಆರ್‌ಡಿಪಿಆರ್ ಇಇ ಬಸವನಗೌಡ ಮೇಟಿಪಾಟೀಲ್ ಉತ್ತರಕ್ಕೆ ಬಿ.ಜಿ.ಗೋವಿಂದಪ್ಪ ಸೇರಿ ನಾನಾ ಶಾಸಕರು ಗರಂ ಆದರು. ಸರಿಯಾಗಿ ಉತ್ತರಿಸುವಂತೆ ಗೋವಿಂದಪ್ಪ ಗದರಿದರೆ, ಚಳ್ಳಕೆರೆ ತಾಲೂಕಲ್ಲಿ 100ಕ್ಕೂ ಹೆಚ್ಚು ಆರ್‌ಒಗಳು ಕೆಟ್ಟಿವೆ ಎಂದು ರಘುಮೂರ್ತಿ ಹೇಳಿದರು.
ಸುಸ್ಥಿತಿಯಲ್ಲಿರುವ, ಬಾಕಿ ವಿದ್ಯುತ್ ಬಿಲ್ ಪಾವತಿಸಿರುವ ಘಟಕಗಳನ್ನು ಗ್ರಾಪಂಗಳ ವಶಕ್ಕೆ ಪಡೆಯಬಹುದು. ಇಲ್ಲವಾದರೆ ಆರ್ಥಿಕ ಹೊರೆ ಭರಿಸುವುದು ಕಷ್ಟವೆಂದು ಕೆಲವು ತಾಪಂ ಇಒಗಳು ಹೇಳಿದರು. 15ನೇ ಹಣಕಾಸು ಅನುದಾನದಲ್ಲಿ ಶೇ.50ನ್ನು ನೀರಿಗೆ ಬಳಸಲು ಅವಕಾಶವಿದ್ದು, ದುರ್ಬಳಕೆ ತಪ್ಪಿಸಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಸೂಚಿಸಿದರು.
ಜಿಲ್ಲಾದ್ಯಂತ 21 ಸಾವಿರ ಕುಡಿವ ನೀರಿನ ಸ್ಯಾಂಪಲ್‌ಗಳ ಪರೀಕ್ಷಿಸಲಾಗಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು. ಜುಲೈ 2ರಂದು ಆರ್‌ಡಿಪಿಆರ್ ಸಚಿವರ ಸಭೆಯಲ್ಲಿ ಆರ್‌ಒಗಳ ನಿರ್ವಹಣೆ ಕುರಿತಂತೆ ಸೂಕ್ತ ನಿರ್ದೇಶನ ಸಿಗಬಹುದೆಂದರು.
ಕಳೆದ ಮಾರ್ಚ್ 8 ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಬ್ಬಿನಹೊಳಲು ಬಳಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ಶೇ.10 ಮೀರಿಲ್ಲವೆಂದು ಅಧಿಕಾರಿಗಳು ಉತ್ತರಿಸಿದರು. ಗುತ್ತಿಗೆದಾರರೊಂದಿಗೆ ಚರ್ಚಿಸೋಣವೆಂದು ಸಚಿವರು ಹೇಳಿದರು. ಈ ವರ್ಷದ ಅಕ್ಟೋಬರ್ ಒಳಗೆ ನೀರು ಹರಿಸಲು ಸಾಧ್ಯವಾಗದೆಂದು ಅಧಿಕಾರಿಗಳು ತಿಳಿಸಿದರು.
ಕೇಂದ್ರದಿಂದ ಭದ್ರಾ ಮೇಲ್ದಂಡೆ ಯೋಜನೆ 5300 ಕೋಟಿ ರೂ.ಬಿಡುಗಡೆಗಾಗಿ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಎಂ. ಕಾರಜೋಳ ಅವರು ಮಂಗಳವಾರ ಹೊಸದೆಹಲಿಯಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಬಾಲ್ಯವಿವಾಹ ಮಾಡಿಸಲು ಮುಂದಾದವರ ಹಾಗೂ ವಿವಾಹ ಮಾಡಿಸಿದವರೆಲ್ಲರ ವಿರುದ್ಧವೂ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ‌್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಸೂಚಿಸಿದರು. ಬಾಲ್ಯವಿವಾಹ ಪ್ರಕರಣಗಳ ವಿರುದ್ಧ ಪೋಕ್ಸೋ ದಾಖಲಾಗುತ್ತಿದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ ಹೇಳಿದರು.
ಶಾಲೆ ಬಿಟ್ಟ ಬಾಲಕಿಯರನ್ನು ಗುರುತಿಸಿ ಮರಳಿ ಅವರನ್ನು ಶಾಲೆಗೆ ಕರೆ ತರಬೇಕೆಂದು ಸಚಿವರು ಸೂಚಿಸಿದರು. ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವ ಕುರಿತಂತೆ ಸರ್ಕಾರ ವರದಿ ಕೇಳಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಭಾರತಿ ಆರ್.ಬಣಕಾರ್ ಹೇಳಿದರು.
ಸೂಕ್ಷ್ಮನೀರಾವರಿ ಯೋಜನೆಯಡಿ ಎಲ್ಲ ಜಿಲ್ಲೆಗಳ ಅಡಕೆ ಬೆಳೆಗಾರರಿಗೆ ಸಹಾಯ ಒದಗಿಸುವ ಸೌಲಭ್ಯ ಒದಗಿಸುವ ಪ್ರಸ್ತಾವನೆ ಇದೆ ಎಂದು ತೋಟಗಾರಿಕೆ ಇಲಾಖೆ ಡಿಡಿ ಜಿ.ಸವಿತಾ ಹೇಳಿದರು. ಬೆಳೆವಿಮೆ ಪರಿಹಾರ, ಬೆಳೆ ನಷ್ಟ ಪರಿಹಾರ ದುರುಪಯೋಗ ಪ್ರಕರಣಗಳಿಗೆ ಸಂಬಂಧಿಸಿದ ತಡೆಯಾಜ್ಞೆಗಳನ್ನು ತೆರವುಗೊಳಿಸಬೇಕೆಂದು ಕೃಷಿ ಇಲಾಖೆ ಜೆಡಿ ಬಿ.ಮಂಜುನಾಥ್‌ಗೆ, ಸಭೆ ತಾಕೀತು ಮಾಡಿತು.
ಜಿಲ್ಲೆಯ ಎಲ್ಲ ಇಲಾಖೆಗಳ ವಸತಿ ಶಾಲೆಗಳ 6ನೇ ತರಗತಿಯ 1750 ಸೀಟುಗಳಿಗೆ 6500 ಅರ್ಜಿ ಬಂದಿವೆ. 1359 ವಿದ್ಯಾರ್ಥಿಗಳ ಅಡ್ಮಿಷನ್ ಆಗಿದೆ ಎಂದು ಸಮಾಜಕಲ್ಯಾಣ ಇಲಾಖೆ ಜೆಡಿ ಜಗದೀಶ್ ಹೆಬ್ಬಳ್ಳಿ ಹೇಳಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಕಳಪೆ ಸಾಧ ನೆಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಫಲಿತಾಂಶ ಸುಧಾರಣೆ ಹೊಣೆ ನಿಮ್ಮದೇ ಎಂದು ಡಿಡಿಪಿಐ ಎಂ.ನಾಸಿರುದ್ದೀನ್‌ಗೆ ತಾಕೀತು ಮಾಡಿದರು.
ಆಸ್ಪತ್ರೆ ಅಭಿವೃದ್ಧಿ, ವೈದ್ಯರು, ವೈದ್ಯಕೀಯ ನೇಮಕಕ್ಕೆ ಕ್ರಮ ವಹಿಸುವಂತೆ ಸಭೆ ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಡಿಎಸ್ ಡಾ.ಎ ಸ್.ಪಿ.ರವೀಂದ್ರ ಅವರಿಗೆ ಸೂಚಿಸಿಸಿತು. ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್, ಡಿ ಸಿ ಟಿ.ವೆಂಕಟೇಶ್, ಕೆಡಿಪಿ ಸದಸ್ಯರಾದ ತಿಮ್ಮಯ್ಯ, ದೀಪಿಕಾ ಸತೀಶ್, ಟಿ.ಕೆ.ಖಲೀಂಉಲ್ಲಾ, ರಂಗಸ್ವಾಮಿ ಇತರ ಅಧಿಕಾ ರಿಗಳಿದ್ದರು.

ಸಿಒಡಿ ತನಿಖೆಗೆ
ಚಿತ್ರದುರ್ಗ ನಿರ್ಮಿತಿ ಕೇಂದ್ರದ ಹಿಂದಿನ ಯೋಜನಾ ನಿರ್ದೇಶಕರ ಅವಧಿಯ ಕೋಟ್ಯಂತರ ರೂ.ಅಕ್ರಮ ಪ್ರಕರಣದ ತನಿಖೆಯ ನ್ನು ಸಿಒಡಿಗೆ ವಹಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಚಿವರು ಡಿಸಿಗೆ ಸೂಚಿಸಿದರು. ಈಗಾಗಲೇ ಪ್ರಕರಣದ ವಿರುದ್ಧ ಮೊಕದ್ದಮೆ ದಾಖಲಾಗಿದೆ. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದರು.

*ಕೋಟ್
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವ ದೂರುಗಳಿವೆ. ಅಬಕಾರಿ ಇಲಾ ಖೆ ಕ್ರಮ ವಹಿಸಬೇಕು. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೂ ಖಾಸಗಿ ಅಥವಾ ಎಂಎಸ್‌ಐಎಲ್ ಮದ್ಯದಂಗಡಿಗೆ ಹಾಗೂ ಸಿಎಲ್-7ಗೆ ಕೂ ಡಬಾರದು.
ಕೆ.ಸಿ.ವೀರೇಂದ್ರ ಪಪ್ಪಿ, ಶಾಸಕ

*ಕೋಟ್
ಖಾಸಗಿ ಲ್ಯಾಬ್‌ಗಳ ಜತೆ ಏನಾದರೂ ಒಳ ಒಪ್ಪಂದವಾಗಿದೆ ಎಂದು ಜನರು ಪ್ರಶ್ನಿಸುವಂತೆ ವರ್ತಿಸಬೇಡಿ. ಚಿಕಿತ್ಸೆಗೆ ಪೂರಕ ವಿವಿಧ ಪರೀಕ್ಷೆಗಳಿಗಾಗಿ ಆಸ್ಪತ್ರೆಗಳಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಿ.
ಬಿ.ಜಿ.ಗೋವಿಂದಪ್ಪ, ಶಾಸಕ

*ಕೋಟ್
ಸಚಿವರು ಮೊದಲು ಜಿಲ್ಲೆಗೆ ರೆಗ್ಯೂಲರ್ ಡಿಡಿಪಿಐ ನೇಮಕಕ್ಕೆ ಕ್ರಮ ವಹಿಸಲಿ. ಆರ್‌ಒಗಳ ರಿಪೇರಿ, ವಿದ್ಯುತ್ ಬಿಲ್ ಪಾವತಿಗೆ ಎಷ್ಟು ಮೊತ್ತ ಬೇಕಾಗುತ್ತದೆ ಎಂಬುದರ ವಿವರ ಸಿದ್ಧಪಡಿಸಲಿ. ಅದನ್ನು ಪರಿಶೀಲಿಸಿ ಡಿಎಂಎಫ್‌ನಿಂದ ಭರಿಸಬಹುದು.
ಎನ್.ವೈ.ಗೋಪಾಲಕೃಷ್ಣ, ಶಾಸಕ

*ಕೋಟ್
ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರ ಬೋಧನಾ ಸಾಮರ್ಥ್ಯ ವೃದ್ಧಿಗೊಳಿಸಬೇಕಿದೆ. ಶಿಕ್ಷಕ ವರ್ಗದಲ್ಲಿ ಶಿಸ್ತು ತರಬೇಕಿದೆ. ಶಿಥಿಲ ಕಟ್ಟಡಗಳಿರುವ ಶಾಲೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕಿದೆ.
ಡಿ.ಟಿ.ಶ್ರೀನಿವಾಸ್, ಎಂಎಲ್‌ಸಿ

*ಕೋಟ್
ಗೋಶಾಲೆಗಳು ಮುಚ್ಚಿರುವುದರಿಂದ, ದೇವರ ಎತ್ತುಗಳ ನಿರ್ವಹಣೆಗೆ ಅನುದಾನದ ಅಗತ್ಯವಿದೆ. ಈ ಎತ್ತುಗಳು ಅಧಿಕವಿರುವ ತಾ ಲೂಕುಗಳಿಗೆ ಅಧಿಕಾರಿಗಳು ಧಾವಿಸಿ ಟ್ರಸ್ಟ್ ರಚಿಸಬೇಕು. ಬೆಳೆವಿಮೆ ಪರಿಹಾರ, ಬೆಳೆ ನಷ್ಟ ಪರಿಹಾರ ದುರುಪಯೋಗ ಪ್ರಕರಣಗಳಲ್ಲಿ ರುವ ತಡೆಯಾಜ್ಞೆಗಳನ್ನು ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ಟಿ.ರಘುಮೂರ್ತಿ ಶಾಸಕ

*ಕೋಟ್
ಹೊಳಲ್ಕೆರೆಯಲ್ಲಿ ರಸ್ತೆ ಅಗಲೀಕರಣದ ವೇಳೆ, ಯಾವುದೇ ಮುಲಾಜು ನೋಡದೆ ಕೆಲಸ ಮಾಡಲು ಹೇಳಿದ್ದೆ. ಜಿಲ್ಲಾ ಕೇಂದ್ರ ಚಿತ್ರದು ರ್ಗದ ಪ್ರಮುಖ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಕೆಲವು ಕಟ್ಟಡ ಮಾಲೀಕರು 1995ರಲ್ಲಿ ತಂದಿರುವ ತಡೆಯಾಜ್ಞೆ ಯಾಕೆ ಈವರೆಗೂ ತೆರವಾಗಿಲ್ಲ.?
ಡಾ.ಎಂ.ಚಂದ್ರಪ್ಪ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net