ಶುದ್ಧ ನೀರಿನ ಘಟಕ ಉದ್ಘಾಟನೆ

17 NMG 01 (4)
Published on

ನಾಗಮಂಗಲ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುರಕ್ಷತೆಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಳೀಯ ಸ್ತ್ರೀ ಶಕ್ತಿ ಸಂಘಗಳು ನಿರ್ವಹಣೆ ಮಾಡುವ ಮೂಲಕ ಮಹಿಳೆಯರೂ ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಮಾಜ ಸೇವಕ ಫೈಟರ್ ರವಿ ತಿಳಿಸಿದರು.


ತಾಲೂಕಿನ ಕೋಟೆಬೆಟ್ಟದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ವೈಯಕ್ತಿಕವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಒಂದು ಹಳ್ಳಿ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕೆಂದರೆ ಅಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು, ಆರೋಗ್ಯ ಸೇವೆ ಮುಖ್ಯ. ತಾಲೂಕಿನ ಬಹುತೇಕ ಗ್ರಾಮಗಳಿಗೆ ಇಂದಿಗೂ ಕನಿಷ್ಠ ಮೂಲಸೌಕರ್ಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ತಾಲೂಕಿನಲ್ಲಿ ಅಗತ್ಯವಿರುವ ಶಾಲೆಗಳು, ಹಳ್ಳಿಗಳಿಗೆ ವೈಯಕ್ತಿಕವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿಕೊಡುತ್ತಿದ್ದೇನೆ. ಹೋಬಳಿ ಕೇಂದ್ರಗಳಲ್ಲಿ ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳ ಶೈಕ್ಷಣಿಕ ಪಗ್ರತಿಗೆ ಪೂರಕವಾಗಿ ಅಗತ್ಯ ಪರಿಕರಗಳನ್ನು ನೀಡುತ್ತಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.


ಕೋಟೆಬೆಟ್ಟದಲ್ಲಿ ನಿರ್ಮಿಸಿರುವ ನೀರಿನ ಘಟಕವನ್ನು ಗ್ರಾಮದ ಸ್ತ್ರೀ ಶಕ್ತಿ ಸಂಘಗಳು ನಿರ್ವಹಣೆ ಮಾಡಿದರೆ ಅದರಿಂದ ಸಂಗ್ರಹವಾಗುವ ಹಣವನ್ನು ಸಂಘಕ್ಕೆ ಬಳಕೆ ಮಾಡಿಕೊಳ್ಳಬಹುದು. ಇದರಿಂದ ಮಹಿಳೆಯರೂ ಅಭಿವೃದ್ಧಿ ಹೊಂದಬಹುದು. ಆ ನಿಟ್ಟಿನಲ್ಲಿ ಗ್ರಾಮದ ಸ್ತ್ರೀ ಶಕ್ತಿಸಂಘಗಳ ಸದಸ್ಯರು ಘಟಕ ನಿರ್ವಹಣೆಗೆ ಮುಂದಾಗಬೇಕು ಎಂದು ಹೇಳಿದರು.


ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್, ಮುಖಂಡರಾದ ದೊಂದೆಮಾದಹಳ್ಳಿ ನಾಗೇಶ್, ಅರ್ಜುನ್, ಪವನ್, ಕೋಟೆಬೆಟ್ಟ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net