

ಕೆ.ಎಂ.ದೊಡ್ಡಿ: ಶುದ್ಧ ಕುಡಿಯುವ ನೀರನ್ನೇ ಬಳಸಿ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳೋಣ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಕದಲೂರು ಉದಯ್ ಹೇಳಿದರು.
ಎಸ್.ಐ.ಹೊನ್ನಲಗೆರೆ ಗ್ರಾ.ಪಂ. ವ್ಯಾಪ್ತಿಯ ಎಚ್.ಹೊಸಹಳ್ಳಿಯಲ್ಲಿ ಶನಿವಾರ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮಗಳಾಗುತ್ತಿವೆ. ಹಲವು ರೋಗಗಳು ಎರಗಲು ನೀರೇ ಪ್ರಮುಖ ಕಾರಣವಾಗಿದೆ. ಹಾಗಾಗಿ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾದ ಶುದ್ಧ ನೀರಿಗೆ ಟ್ರಸ್ಟ್ ಮೊದಲ ಆದ್ಯತೆ ನೀಡಿರುವುದಾಗಿ ಉದಯ್ ಹೇಳಿದರು.
ಗ್ರಾಮಸ್ಥರ ಬೇಡಿಕೆ ಮೇರೆಗೆ, ಗ್ರಾಮದ ಜನರ ಆರೋಗ್ಯ ಪಾಲನೆ ಹಿತದೃಷ್ಠಿಯಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಮದ್ದೂರು ಕ್ಷೇತ್ರದ ಸಮಸ್ತ ಜನರಿಗೂ ಸ್ಪಂದಿಸುವುದು, ಸಮಸ್ಯೆಗಳನ್ನು ಪರಿಹರಿಸುವುದು, ಹಲವು ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಟ್ರಸ್ಟ್ ಉದ್ದೇಶ. ಇವುಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲರ ಸಹಕಾರ ಅಗತ್ಯ ಎಂದವರು ಹೇಳಿದರು. ಗ್ರಾ.ಪಂ. ಸದಸ್ಯ ಮಲ್ಲೇಶ್, ಮುಖಂಡರಾದ ಎಚ್.ಸಿ ಮಹದೇವಪ್ಪ, ಶಿವಸ್ವಾಮಿ, ಕುಮಾರ್, ಮಲ್ಲೇಶ್, ರಮೇಶ್, ದೊಡ್ಡಯ್ಯ, ಶಿವಣ್ಣ, ಗುಂಡಣ್ಣ ಇತರರು ಹಾಜರಿದ್ದರು.