

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ದೊಡ್ಡಕಮರವಳ್ಳಿ ಗ್ರಾಪಂ ವ್ಯಾಪ್ತಿಯ ಚಾಮರಾಯನಕೋಟೆಯಲ್ಲಿ ನಾಲ್ಕೈದು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಶುದ್ಧ ಕುಡಿಯುವ ನೀರಿನ ಘಟಕ, ಸುಮಾರು ಒಂದೂವರೆ ವರ್ಷದಿಂದ ಕೆಟ್ಟುನಿಂತು ಬಳಕೆಗೆ ಬಾರದಂತಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಅಶುದ್ಧ ಹಾಗೂ ಪ್ಲೋರೈಡ್‌ಯುಕ್ತ ನೀರು ಕುಡಿದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದ ಹಿನ್ನಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಘಟಕಗಳನ್ನು ಆರಂಭಿಸಲಾಗಿದೆ. ಆದರೆ ಬಹುತೇಕ ಗ್ರಾಮಗಳಲ್ಲಿ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದೆ ನಿರುಪಯುಕ್ತವಾಗಿವೆ. ಅಂತೆಯೆ, ಚಾಮರಾಯನಕೋಟೆ ಗ್ರಾಮದ ಘಟಕ ಕೆಟ್ಟುನಿಂತು ಬಳಕೆಗೆ ಬಾರದಂತಾಗಿದೆ. ಆದರೂ ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಾಗಲಿ ಅಥವಾ ಗ್ರಾಪಂ ಅಧಿಕಾರಿಗಳಾಗಲಿ ದುರಸ್ತಿಗೆ ಕ್ರಮಕೈಗೊಳ್ಳದೆ ಇರುವುದಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಭಕ್ತರು ಪರದಾಟ: ಚಾಮರಾಯನಕೋಟೆ ಮೈಸೂರು ಜಿಲ್ಲೆಯ ಗಡಿಗ್ರಾಮವಾಗಿದ್ದು, ಹಾಸನ ಮತ್ತು ಮಡಿಕೇರಿ ಜಿಲ್ಲೆಗೆ ಸಮೀಪವಾಗಿದೆ. ಅಲ್ಲದೆ, ಈ ಗ್ರಾಮದಲ್ಲಿ ಕಾವೇರಿ ನದಿ ಹಾದು ಹೋಗಿದೆ. ನದಿಯ ಬೃಹತ್ ಬಂಡೆಯಲ್ಲಿ ಆಂಜನೇಯಸ್ವಾಮಿ ಮೂಡಿದ್ದು, ಇದರಿಂದ ಈ ಸ್ಥಳವನ್ನು ಹೊಳೆ ಆಂಜನೇಯಸ್ವಾಮಿ ಗುಡಿ ಎಂದು ಕರೆಯುತ್ತಾರೆ. ಈ ಗುಡಿಗೆ ನಿತ್ಯ ಭಕ್ತಾದಿಗಳು ಆಗಮಿಸುತ್ತಿದ್ದು, ಗುಡಿಯ ಆವರಣದಲ್ಲಿ ನಾಮಕರಣ, ಬೀಗರ ಔತಣ, ಭೋಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಸುಮಾರು 5 ರಿಂದ 7 ಕೀ.ಮೀ ದೂರದ ಗ್ರಾಮಗಳಿಗೆ ಹೋಗಿ ತರಬೇಕಾಗಿರುವ ಪರಿಸ್ಥಿತಿ ಉಂಟಾಗಿದೆ. ಇದು ಕೇವಲ ಭಕ್ತಾದಿಗಳು ಮಾತ್ರವಲ್ಲದೆ, ಇಲ್ಲಿನ ನಿವಾಸಿಗಳಿಗೂ ಸಮಸ್ಯೆಯಾಗಿದೆ.
ಈ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಆಳೆತ್ತರದ ಗಿಡಗಂಟಿಗಳು ಬೆಳೆದು ನಿಂತಿದೆ. ಸರಿಯಾದ ನಿರ್ವಹಣೆಯ ಇಲ್ಲದೆ, ನಿವಾಸಿಗಳು ಹಾಗೂ ಮಕ್ಕಳು ಘಟಕದ ಬಳಿ ಓಡಾಡುವುದಕ್ಕೂ ಆತಂಕ ಪಡುವಂತಾಗಿದ್ದು, ಪಂಚಾಯಿತಿ ಅಧಿಕಾರಿಗಳ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುದ್ಧ ಕುಡಿಯವ ನೀರಿನ ಘಟಕದಿಂದ ನಿವಾಸಿಗಳು ಮಾತ್ರವಲ್ಲದೆ, ಹೊಳೆ ಹನುಮಂತರಾಯನ ಗುಡಿಗೆ ಭೇಟಿ ನೀಡಿವ ಭಕ್ತಾದಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ ಕೆಟ್ಟು ನಿಂತು ವರ್ಷ ಕಳೆದರೂ ದುರಸ್ತಿಗೆ ನಿರ್ಲಕ್ಷೃ ವಹಿಸಿದ್ದಾರೆ. ಈ ಬಗ್ಗೆ ತಾಪಂ ಇಒ ಗಮನಕ್ಕೆ ತರಲಾಗಿದೆ. ಇನ್ನಾದರೂ ಅಧಿಕಾರಿಗಳು ಇದರ ರೀಪೇರಿಗೆ ಮುಂದಾಗಿ ಅನುಕೂಲ ಕಲ್ಪಿಸಬೇಕಿದೆ.
ಅಂಬೇಡ್ಕರ್, ಸ್ಥಳೀಯ ನಿವಾಸಿ, ಚಾಮರಾಯನಕೋಟೆ
ಈ ಸಮಸ್ಯೆಯ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಅಲ್ಲದೆ, ದುರಸ್ತಿ ಮಾಡುವಂತೆ ನಮಗೆ ಯಾರೂ ಮನವಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ವಿಚಾರ ತಿಳಿದು ಪರಿಶೀಲನೆ ನಡೆಸಲಾಗುವುದು.
ಶಿಲ್ಪಾ ಶ್ರೀ, ಪಿಡಿಒ, ದೊಡ್ಡಕಮರವಳ್ಳಿ
ಪಿರಿಯಾಪಟ್ಟಣಕ್ಕೆ ಹೊಸದಾಗಿ ಆಗಮಿಸಿದ್ದೇನೆ. ಚಾಮರಾಯನಕೋಟೆ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಯಾರು ಮಾಡುತ್ತಿದ್ದಾರೆ ಎಂಬುದನ್ನು ಶೀಘ್ರವೇ ಪರಿಶೀಲಿಸಿ ದುರಸ್ತಿ ಬಗ್ಗೆ ಕ್ರಮಕೈಗೊಳ್ಳಲಾಗುವುದು.
ಹಿತೇಂದ್ರ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಿರಿಯಾಪಟ್ಟಣ