ಹನೂರು: ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪಾಲಿಸುವುದರ ಮೂಲಕ ಸಮಾಜಕ್ಕೆ ಶುದ್ಧ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ಮಹಾನ್ ಶಿವಶರಣ. ಆದ್ದರಿಂದ ಪ್ರತಿಯೊಬ್ಬರೂ ಅವರ ಆದರ್ಶವನ್ನು ಪಾಲಿಸಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಅಸ್ಪಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಸೇರಿದಂತೆ ಇನ್ನು ಅನೇಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇದರಿಂದ ಬಡವರು, ಮಹಿಳೆಯರು, ದೀನದಲಿತರು ಹತಾಶೆಯಿಂದ ಅಸಹನೀಯ ಬದುಕನ್ನು ನಡೆಸುತ್ತಿದ್ದರು. ಈ ಕಾಲಘಟ್ಟದಲ್ಲಿ ಸಮಾಜದಲ್ಲಿ ಅಸಮಾನತೆಯನ್ನು ತೊಲಗಿಸುವ ಸಲುವಾಗಿ ಬಸವ ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಇವರಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯ ಸ್ಥಾನದಲ್ಲಿ ಒಬ್ಬರೆನಿಸಿದ್ದಾರೆ. ಇವರು ಕಾಯಕವನ್ನು ಭಕ್ತಿಯ ಜೀವನದ ಉಸಿರು ಎಂದು ನಂಬಿಕೊಂಡು ಕಾಯಕನಿಷ್ಠೆಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಜತೆಗೆ ಶೋಷಿತ ವರ್ಗದ ಏಳಿಗೆಗೆ ಶ್ರಮಿಸಿದ ಮಹಾನ್ ಶರಣ. ಇವರು ರಚಿಸಿರುವಂತಹ ವಚನಗಳು ಉತ್ತಮ ಸಮಾಜಕ್ಕೆ ದಾರಿದೀಪವಾಗಿದೆ. ಈ ದಿಸೆಯಲ್ಲಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜತೆಗೆ ಸಂಘಟಿತರಾಗಬೇಕಿದೆ. ಇದರಿಂದ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಎಸ್ಸಿಗೆ ಸೇರಿಸಿ: ಇದೇ ವೇಳೆ ಶ್ರೀವೀರ ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ವಿಜಯ್ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 4 ಸಾವಿರ ಮಡಿವಾಳ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಆದರೆ ಸಮುದಾಯ ಭವನವಿಲ್ಲ. ಇದರಿಂದ ಸಭೆ, ಸಮಾರಂಭ, ಮದುವೆ ಹಾಗೂ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಸಮುದಾಯ ಭವನವನ್ನು ನಿರ್ಮಿಸಿ ಕೊಡಬೇಕು. ಜತೆಗೆ ಸಾಮಾಜಿಕ, ಶೈಕ್ಷಣ ಕ ಹಾಗೂ ರಾಜಕೀಯವಾಗಿ ಸಮಾಜದಲ್ಲಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಬಿಇಒ ಗುರುಲಿಂಗಯ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಶೇಷಣ್ಣ, ಮುಖಂಡರಾದ ಕೃಷ್ಣ, ಮೋಹನ್, ಮಹದೇವ, ನಂಜುಂಡ ಶೆಟ್ಟಿ ಮತ್ತಿತರರಿದ್ದರು