

ಗುರುಗುಂಟಾ: ಗ್ರಾಮದ ಹೊರವಲಯದಲ್ಲಿರುವ ಶ್ರೀದೇವಿ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ಸಂಪನ್ನಗೊಂಡವು.
ಮಂಗಳವಾರ ಲಲಿತ ಸಹಸ್ರನಾಮ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅಯ್ಯಪ್ಪ ಮಾಲಾಧಾರಿಗಳು ಕಠಿಣ ವ್ರತಾಚರಣೆಯೊಂದಿಗೆ ಈ ಧ್ಯಾನ ಮಂದಿರದಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುವ ಸತ್ಸಂಗ ಕಾರ್ಯಕ್ರಮ ಚದುರಿದ ಮನಸ್ಸುಗಳು ಒಂದುಗೂಡಲು ಸಹಕಾರಿಯಾಗಿದೆ ಎಂದರು.
ವಾಸವಿ ಮಹಿಳಾ ಮಂಡಳಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಸ್ಕಿ ಅಕ್ಕಮಹಾದೇವಿ ಗಚ್ಚಿನಮಠ ಮಹಿಳಾ ಮಂಡಳಿಯಿಂದ ಲಲಿತ ಸಹಸ್ರ ನಾಮಾವಳಿ ಪಾರಾಯಣ ನಡೆಯಿತು. ಲಿಂಗಸುಗೂರಿನ ಮಾಣಿಕೇಶ್ವರಿ ಅಮ್ಮ ಹಾಜರಿದ್ದರು.
ಬುಧವಾರ ಮಂಡಲ ಪೂಜೆಯಲ್ಲಿ ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದನಾಯಕ ಮಾತನಾಡಿ, ಪರಿಶುದ್ಧ ಆಚಾರ-ವಿಚಾರ ರೂಢಿಸಿಕೊಂಡಾಗ ವ್ರತದ ಫಲ ಪ್ರಾಪ್ತಿಯಾಗುತ್ತದೆ ಎಂದರು. ಮಾಲಾಧಾರಿಗಳಿಂದ ಅಯ್ಯಪ್ಪಸ್ವಾಮಿ ಮೂರ್ತಿಗೆ ಅಭಿಷೇಕ, ಅಷ್ಟೋತ್ತರ, ಪಡಿಪೂಜೆ, ಇತರ ಕೈಂಕರ್ಯ ಮತ್ತು ಭಜನೆ ನಡೆದವು.