ಶುಚಿತ್ವದ ಕಡೆಗೆ ಹೆಚ್ಚಿನ ಗಮನ ನೀಡಿ

ydg3
ರಾಜನಕೋಳೂರ ಗ್ರಾಮದ ಕಿತ್ತೂರರಾಣಿ ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ಸುಶೀಲಾ ಭೇಟಿ ನೀಡಿ ಮಕ್ಕಳೊಂದಿಗೆ ಚರ್ಚಿಸಿದರು.
Published on

ಕೊಡೇಕಲ್: ವಸತಿ ನಿಲಯದ ಮಕ್ಕಳಿಗೆ ನೀಡಲಾಗುವ ಊಟದ ಗುಣಮಟ್ಟ ಹಾಗೂ ನಿಲಯದ ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.

ರಾಜನಕೋಳೂರ ಗ್ರಾಮದ ಕಿತ್ತೂರರಾಣಿ ಚನ್ನಮ್ಮ ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಶಾಲೆಯ ಆವರಣ, ತರಗತಿ ಕೋಣೆ, ವಿದ್ಯಾರ್ಥಿನಿಯರ ವಸತಿ ಕೋಣೆ ಹಾಗೂ ಅಡುಗೆ ಕೋಣೆ ಸೇರಿ ಇನ್ನಿತರ ಅಗತ್ಯ ಮೂಲಸೌಕರ್ಯವನ್ನು ಪರಿಶೀಲಿಸಿ, ಪ್ರಾಚಾರ್ಯರಿಂದ ಅಗತ್ಯ ಮಾಹಿತಿ ಪಡೆದರು. ಇದಾದ ನಂತರ ನೇರವಾಗಿ ಅಡುಗೆ ಕೋಣೆಗೆ ತೆರಳಿದ ಅವರು, ಅಡುಗೆಯಲ್ಲಿ ನಿರತರಾದ ಸಿಬ್ಬಂದಿ ವಹಿಸುವ ಸ್ವಚ್ಛತೆಯನ್ನು ಪರಿಶೀಲಿಸಿ ಗುಣಮಟ್ಟದ ಆಹಾರವನ್ನು ಶುಚಿಯಾಗಿ ಸಿದ್ಧತೆ ಮಾಡಬೇಕು ಎಂದು ಸೂಚನೆ ನೀಡಿ, ನಿತ್ಯ ಕೊಡುವ ಆಹಾರ ಕುರಿತಾಗಿ ಮಕ್ಕಳಿಂದ ಮಾಹಿತಿ ಕಲೆ ಹಾಕಿದರು.

ಚಿತ್ರಕಲಾ ಶಿಕ್ಷಕ ಬಸವರಾಜ ಕೋಲಾರ ಅವರು ತಮ್ಮ ಕೈಯಾರೆ ಚಿತ್ರಿಸಿದ ಜಿಲ್ಲಾಧಿಕಾರಿಗಳ ಭಾವಚಿತ್ರವನ್ನು ಅವರಿಗೆ ಉಡುಗರೆಯಾಗಿ ನೀಡಿದಾಗ ಒಂದು ಕ್ಷಣ ಮೂಕಸ್ಮಿತರಾದ ಡಾ.ಸುಶೀಲಾ ಅವರು, ಶಿಕ್ಷಕರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಪ್ಪ ಅಣಬಿ, ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಪ್ರಾಚರ‍್ಯ ಮಾನಪ್ಪ ಸತ್ಯ, ನಿಲಯ ಪಾಲಕಿ ಸಂಗಮ್ಮ ರಡ್ಡಿ, ರಾಜೇಶ್ವರಿ ಹಿರೇಮಠ, ಬಸಯ್ಯಸ್ವಾಮಿ ಯಾಳಗಿ, ಸಂಗನಬಸ್ಸು ಪಂಜಗಲ್, ಬಸವರಾಜ ಕೋಲಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net