ಶುಂಠಿ ಬೆಳೆದವನಿಗೆ ಬೆಲೆ ಸಿಗುತ್ತಿಲ್ಲ

30spt1
Published on

ಸೋಮವಾರಪೇಟೆ: ಶುಂಠಿ ಬೆಲೆ ಗಗನಕ್ಕೇರಿದೆ. ಮೊದಲ ಬಾರಿಗೆ 60 ಕೆಜಿ ತೂಕದ ಹಸಿ ಶುಂಠಿಗೆ ದಾಖಲೆ ಬೆಲೆ 14 ಸಾವಿರ ರೂ. ಬಂದುಹೋಗಿದೆ. ಈಗ 10 ಸಾವಿರ ರೂ. ಆಸುಪಾಸಿನಲ್ಲಿದೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಕೃಷಿಕರು ಈಗ ಆತಂಕಗೊಂಡಿದ್ದಾರೆ.


ಕಳೆದ ಹಲವು ವರ್ಷಗಳಿಂದ ಅಕಾಲಿಕ ಹಾಗೂ ಧಾರಾಕಾರ ಮಳೆಯಿಂದ ಮಹಾಕಾಳಿ, ಕೊಳೆ ರೋಗದಿಂದ ಶುಂಠಿ ಫಸಲು ಕಳೆದು ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಿದ್ದ ರೈತರು ಶುಂಠಿ ಸಹವಾಸವೇ ಬೇಡವೆಂದು ಕೃಷಿಯನ್ನೇ ಕೈಬಿಟ್ಟಿದರು.


ಪ್ರಾರಂಭದಲ್ಲಿ ಕೇರಳದಿಂದ ಬಂದು ಶುಂಠಿ ಕೃಷಿ ಮಾಡಿದವರು ಲಾಭ ಮಾಡಿಕೊಂಡಿದ್ದರು. ನಂತರ ಶುಂಠಿ ಕೃಷಿ ರೋಗಬಾಧೆಗೆ ತುತ್ತಾದ ನಂತರ, ಕೇರಳದಿಂದ ಬರುವವರ ಸಂಖ್ಯೆ ಕಡಿಮೆಯಾಗಿ, ಸ್ಥಳೀಯ ರೈತರೇ ಶುಂಠಿ ಕೃಷಿ ಪ್ರಾರಂಭಿಸಿದರು. ಆದರೆ ರೋಗನಿಯಂತ್ರಣಕ್ಕೆ ಅನುಸರಿಸಬೇಕಾದ ನಿಯಮ ಹಾಗೂ ಕೀಟನಾಶಕಗಳ ಉಪಯೋಗವನ್ನು ಹೇಳಿಕೊಡಲಿಲ್ಲ. ಈ ಕಾರಣದಿಂದ ಸ್ಥಳೀಯ ರೈತರಿಗೆ ರೋಗಬಾಧೆ ನಿಯಂತ್ರಣ ಮಾಡಲು ಸಾಧ್ಯವಾಗದ ಕಾರಣ ನಷ್ಟಕ್ಕೆ ಒಳಗಾದರು. ರೋಗಪೀಡಿತ ಶುಂಠಿ ಫಸಲಿಗೆ ಬೇಡಿಕೆ ಇಲ್ಲದಂತಾಯಿತು.

ರೈತರಿಂದ ಕಡಿಮೆ ಬೆಲೆಗೆ ಖರೀದಿ: ನಿರಂತರ ನಷ್ಟದಿಂದ ಶೇ.75 ರಷ್ಟು ರೈತರು ಕೃಷಿಯನ್ನು ಕೈಬಿಟ್ಟರು. ಕೆಲವೊಂದು ಗ್ರಾಮಗಳಲ್ಲಿ ಒಂದೆಕೆರೆ, ಅರ್ಧ ಎಕರೆ ಜಾಗದಲ್ಲಿ ಮಾತ್ರ ಶುಂಠಿ ಬೆಳೆದಿದ್ದಾರೆ. ಶುಂಠಿ ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಬಂದಿದೆ. ಆದರೆ ಮಧ್ಯವರ್ತಿಗಳು, ವ್ಯಾಪಾರಸ್ಥರು ಹಣ ಮಾಡಿಕೊಳ್ಳುತ್ತಿದ್ದಾರೆ. ಶುಂಠಿ ಚೆನ್ನಾಗಿಲ್ಲ, ರೋಗ ಇದೆ ಎಂದು ಹೆದರಿಸಿ ರೈತರಿಂದ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ ಎಂಬ ದೂರಿದೆ. ಬೆಲೆ ಇದ್ದರೂ ಬೆಳೆದವನಿಗೆ ಬೆಲೆ ಸಿಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net