

ನಾಗಮಂಗಲ: ಕೃಷಿ ಇಲಾಖೆಯ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಬಿಂಡಿಗನವಿಲೆ ಹೋಬಳಿ ತಿಟ್ಟನಹೊಸಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಗುರುವಾರ ವಿತರಿಸಿ ಮಾತನಾಡಿದರು.
ಆ್ಯಪ್ ಮೂಲಕ ರೈತರು ಕುಳಿತಲ್ಲಿಯೇ ಇಲಾಖೆಯ ಮಾಹಿತಿ ತಿಳಿಯುವ ಜತೆಗೆ ಸೌಲಭ್ಯಗಳನ್ನು ಪಡೆಯಲು ಸುಲಭವಾಗಲಿದೆ. ರೈತರು ಸಮಗ್ರ ಕೃಷಿ ಹಾಗೂ ವೈಜ್ಞಾನಿಕ ಕೃಷಿಯತ್ತ ಗಮನಹರಿಸಬೇಕಿದೆ. ಒಣ ಭೂಮಿಯಲ್ಲಿ ಯಾವ ರೀತಿ ವ್ಯವಸಾಯ ಮಾಡಬೇಕು? ಯಾವ ವಾತಾವರಣಕ್ಕೆ ಯಾವ ಬೆಳೆ ಹಾಕಬೇಕು? ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಾರೆ. ಇದರ ಜತೆಗೆ ಸರ್ಕಾರದ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಅದನ್ನು ತಿಳಿದು ಕೃಷಿ ಮಾಡಿದಾಗ ಮಾತ್ರ ಲಾಭದಾಯಕ ಕೃಷಿ ಮಾಡಲು ಸಾಧ್ಯವಾಗುತ್ತದೆ ಹಾಗೂ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಅಶೋಕ್‌ಕುಮಾರ್ ಮಾತನಾಡಿ, ಪೂರ್ವ ಮುಂಗಾರಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಆದರೆ ಇತ್ತೀಚೆಗೆ ಉತ್ತಮವಾಗಿ ಮಳೆಯಾಗುತ್ತಿದ್ದು, ಕೃಷಿ ಇಲಾಖೆ ವತಿಯಿಂದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡಿಕೊಳ್ಳಲಾಗಿದೆ. 25,316 ರೈತರು ಕಳೆದ ಬಾರಿ ಬೆಳೆ ವಿಮೆ ಮಾಡಿಸಿದ್ದರು. ಬಹುತೇಕ ರೈತರಿಗೆ ವಿಮೆ ಹಣ ಪಾವತಿಯಾಗಿದೆ. ರೈತರು ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿದರೆ ಅನುಕೂಲವಿದೆ ಎಂದರು.
26 ರೈತರಿಗೆ ವಿತರಣೆ: ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿವೃದ್ಧಿ ಯೋಜನೆಯಡಿ 2014-15 ರಲ್ಲಿ ಕ್ರಿಯಾ ಯೋಜನೆ ಮಾಡಿರುವ 26 ಫಲಾನುಭವಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಕೃಷಿ ಸಂಬಂಧಿತ ವಿವಿಧ ಯಂತ್ರೋಪಕರಣಗಳು ಹಾಗೂ ವಿವಿಧ ಬಗೆಯ ಗಿಡಗಳನ್ನು ವಿತರಣೆ ಮಾಡಿದರು.
ಪಾಂಡವಪುರ ಉಪಕೃಷಿ ನಿರ್ದೇಶಕಿ ಮಮತಾ, ಸಹಾಯಕ ಕೃಷಿ ನಿರ್ದೇಶಕ ಜಯರಾಮ್, ಎಪಿಎಂಸಿ ನಿರ್ದೇಶಕ ಮಂಜೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದಿನೇಶ್, ಮುಖಂಡರಾದ ಎನ್.ಟಿ.ಕೃಷ್ಣಮೂರ್ತಿ, ತಿಮ್ಮರಾಯಿಗೌಡ, ಸುನೀಲ್ ಲಕ್ಷ್ಮೀಕಾಂತ್, ಮುಕುಂದ, ವಜ್ರಕುಮಾರ್ ಸೇರಿದಂತೆ ಮತ್ತಿತರಿದ್ದರು.