

ಶ್ರವಣಬೆಳಗೊಳ: ಹಾಸನ ನಗರಸಭೆಯನ್ನು ನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿದಂತೆ ಗ್ರಾಮ ಪಂಚಾಯಿತಿಯಾಗಿರುವ ಶ್ರವಣಬೆಳಗೊಳ ಕ್ಷೇತ್ರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗುವುದು. ಇದರ ಜತೆಗೆ ಅರಕಲಗೂಡು ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಭರವಸೆ ನೀಡಿದರು.
ಜೈನರ ಕಾಶಿ ವಿಶ್ವ ವಿಖ್ಯಾತ ಶ್ರವಣಬೆಳಗೊಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವ ವಿಖ್ಯಾತಿ ಪಡೆದಿರುವ ಶ್ರವಣಬೆಳಗೊಳದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಕಲ ನೆರವನ್ನು ನೀಡಲಿದೆ. ಕ್ಷೇತ್ರಕ್ಕೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಶ್ರೀಗಳು ಸಲ್ಲಿಸುವ ಮನವಿಯನ್ನು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿಮ್ಮೆಲ್ಲರ ಸಹಕಾರದಿಂದ ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇಂದು ನಡೆದ ಈ ಕಾರ್ಯಕ್ರಮ ಇತಿಹಾಸದಲ್ಲಿ ಉಳಿಯುವಂತಹದ್ದು. ಶ್ರೀಗಳು ನಡೆದು ಬಂದ ಹಾದಿ, ಅವರು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ, ಸಾಹಿತ್ಯ ಕ್ಷೇತ್ರಗಳಿಗೆ ಸಲ್ಲಿಸಿರುವ ಸೇವೆ ಅಜರಾಮರವಾಗಿ ಉಳಿಯಲಿದೆ. ಹುಟ್ಟು ಅನಿವಾರ್ಯ, ಸಾವು ನಿಶ್ಚಿತ. ಈ ಹುಟ್ಟು-ಸಾವಿನ ನಡುವೆ ನಾವು ಪ್ರಪಂಚಕ್ಕೆ ನೀಡುವ ಕೊಡುಗೆಯೇ ಶಾಶ್ವತ. ಹೀಗಾಗಿ ಎಲ್ಲರೂ ಶ್ರೀಗಳು ಹಾಕಿಕೊಟ್ಟಂತಹ ಮಾರ್ಗದರ್ಶನ ಸಾಗಿ, ನಮ್ಮ ಬದುಕಿನಲ್ಲೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತವರಾಗಬೇಕು ಎಂದು ಕರೆ ನೀಡಿದರು.
ನಾಡಿನ ತುಂಬೆಲ್ಲಾ ಭಕ್ತರನ್ನು ಹೊಂದಿರುವ ಧರ್ಮಸ್ಥಳದಲ್ಲಿ ಇರುವುದು ಶೈವರ ಹೆಗ್ಗುರುತು, ಪೂಜೆ ಮಾಡುವುದು ವೈಶ್ಯರು. ಆದರೆ ಅದರ ಆಡಳಿತ ನಡೆಸುವುದು ಜೈನರು. ಅಂದರೆ ಈ ಮೂಲಕ ದೇಶಕ್ಕೆ ಸರ್ವಧರ್ಮ ಸಮಾನತೆ ಸಂದೇಶ ಸಾರಲಾಗಿದೆ. ಎಲ್ಲರೂ ಸಮಾನರು ಎಂಬ ಅರಿವನ್ನು ಮೂಡಿಸಲಾಗಿದೆ ಎಂದು ಹೇಳಿದರು.
ಡಾ.ಡಿ. ವೀರೇಂದ್ರ ಹೆಗಡೆ ಅವರು ಮಾತನಾಡಿ, ಬಾಹುಬಲಿ ಮೂರ್ತಿ ಏಕೆ ಅಷ್ಟು ಎತ್ತರದಲ್ಲಿ ನಿಂತಿದ್ದಾನೆ ಎಂದು ಯಾರಾದರೂ ಕೇಳಿದರೆ, ಎತ್ತರದಲ್ಲಿ ನಿಂತು ಬಾಹುಬಲಿ ವಿಶ್ವಕ್ಕೆ ಶಾಂತಿಯನ್ನು ಬೊಧಿಸುತ್ತಿದ್ದಾರೆ ಎಂದು ಹೇಳುತ್ತೇನೆ. ಇಂದು 57 ಅಡಿಗಿಂತಲೂ ಎತ್ತರದಲ್ಲಿ ಬಾಹುಬಲಿ ಮೂರ್ತಿಯನ್ನು ಕೆತ್ತನೆ ಮಾಡಬಹುದು. ಆದರೆ, 1000 ವರ್ಷಗಳ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಾಧ್ಯವಿಲ್ಲ. ಸಾವಿರ ವರ್ಷಗಳ ಅಖಂಡತ್ವವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ನಾನು ಒಂದೇ ವಯಸ್ಸಿನವರು. ಕೆಲಸ ಮಾಡುವುದರಲ್ಲಿ ಎಲ್ಲರದು ಒಂದು ಶೈಲಿಯಾದರೆ ಭಟ್ಟಾರಕ ಸ್ವಾಮೀಜಿ ಶೈಲಿಯೇ ವಿಭಿನ್ನ. ಅವರು ಒಮ್ಮೆ ಹಿಡಿದ ಕೆಲಸ ಮುಗಿಯುವರರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ. ಕೆಲಸ ಪೂರ್ಣಗೊಂಡ ನಂತರವೇ ಅವರು ಅಲ್ಲಿಂದ ಹೊರಡುವುದು. ಅಂತಹ ಶ್ರೇಷ್ಠ ವ್ಯಕ್ತಿತ್ವ ಅವರದು. ಅವರ ದೂರದೃಷ್ಟಿ, ಕಾರ್ಯ ಪ್ರವೃತ್ತಿ ಎಲ್ಲವೂ ಅಪ್ರತಿಮ ಎಂದು ಗುಣಗಾನ ಮಾಡಿದರು.
ಜೈನ ಸಮುದಾಯದ ಜನರು ಶ್ರೀಮಂತರು ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಅಲ್ಪಸಂಖ್ಯಾತರಾದ ನಮ್ಮಲ್ಲಿ ಸಾಕಷ್ಟು ಜನರು ಬಡವರೇ ಇದ್ದಾರೆ. ಜೈನರಲ್ಲಿ ಶ್ರೀಮಂತಿಕೆ ಹೃದಯದಲ್ಲಿ ಇದೆ. ಆದರೆ, ಕಿಸೆಯಲ್ಲಿ ಇಲ್ಲ. ರಾಜ್ಯ ಸರ್ಕಾರ ಜೈನ ಸಮುದಾಯದ ಜನರಿಗೆ ಆಹಾರ, ಉದ್ಯೋಗ, ಸ್ವಾವಲಂಬಿ ಜೀವನಕ್ಕೆ ಅನುಕೂಲಕರವಾದ ಯೋಜನೆಗಳನ್ನು ತರಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ಉಡುಪಿ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಮಾತನಾಡಿ, ಕಾಲವಾದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಬಗ್ಗೆ ನಾವು ಮತ್ತು ನಮ್ಮ ಗುರುಗಳ ಜತೆ ನೆನಪಿಸಿಕೊಳ್ಳುತ್ತಾ ಇದ್ದೆವು. ಚಾರುಕೀರ್ತಿ ಶ್ರೀಗಳು ನಮ್ಮನ್ನು ಪ್ರತ್ಯೇಕವಾಗಿ ಕರೆದು ಎಲ್ಲರನ್ನೂ ತುಳು ಭಾಷೆಯಲ್ಲಿಯೇ ಮಾತನಾಡಿಸುತ್ತಿದ್ದರು. ಸಮಾಜದ ಉದ್ಧಾರಕ್ಕೆ ಅವರು ಮಾಡಿರುವ ಸಮಾಜ ಸೇವೆ, ಅಹಿಂಸಾ ಧರ್ಮವನ್ನು ಎಲ್ಲ ಕಡೆ ಪಸರಿಸಿದ್ದಾರೆ ಎಂದು ಹೇಳಿದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ, ನಮ್ಮ ಭಾರದಲ್ಲಿ ಜೈನ ಧರ್ಮದ ಕೀರ್ತಿವನ್ನು ಎತ್ತರಕ್ಕೆ ಬೆಳೆಸಿದರು ಭಟ್ಟಾರಕ ಶ್ರೀಗಳು. ಅವರು ಕಾಲವಾಗಿ ಒಂದು ವರ್ಷ ಆಗಿದೆ. ಪೂಜ್ಯ ಚಾರುಕೀರ್ತಿ ಭಟ್ಟಾರ ಕಶ್ರೀಗಳ ಬಗ್ಗೆ ಎಷ್ಟು ಹೇಳಿದರು ಸಾಲದು, ಮಾನವೀಯತೆ ಗುಣ ಹೊಂದಿದ್ದವರು. ಎಲ್ಲರನ್ನು ಪ್ರೀತಿಯಿಂದ ಕಂಡವರು. ಬಸವಣ್ಣನವರ ಸಾಲುಗಳನ್ನು ಚಾರುಕೀರ್ತಿ ಭಟ್ಟಾರಕ ಶ್ರೀಗಳ ಬದುಕಿನಲ್ಲಿ ಕಾಣಬಹುದಿತ್ತು. ಚಾರುಕೀರ್ತಿ ಭಟ್ಟಾರಕ ಶ್ರೀಗಳಿಗೆ ಅವರೇ ಸಾಟಿಯಾಗಿದ್ದರು ಎಂದುರ.
ನಾನು ಒಮ್ಮೆ ಮಹಾಮಸ್ತಕಾಭಿಷೇಕಕ್ಕೆ ಬಂದಾಗ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಕಾಲಿನಲ್ಲಿ ರಕ್ತ ಸುರಿಯುತ್ತಿತ್ತು. ಆದರೂ ಅವರು ನಿರಂತರವಾಗಿ ಚಟುವಟಿಕೆಯಿಂದ ಓಡಾಡುತ್ತಿದ್ದರು. ದೇಶದಾದ್ಯಂತ ವಿದ್ವಾಂಸರನ್ನು ಕರೆಸಿ ಹಲವು ಸಾಹಿತ್ಯ ಸಮ್ಮೇಳನ, ಭಾಷೆ ಉಳಿಸುವ ಕೆಲಸ ಮಾಡಿದರು. ಚಾರುಕೀರ್ತಿ ಭಟ್ಟಾರಕ ಶ್ರೀಗಳ ಪಾದ, ನಿಷಧಿ ಮಂಟಪ ನೋಡಿದರೆ ಬಾಹುಬಲಿ ಸ್ವಾಮಿ ನೋಡಿದಂತೆ ಭಾಸವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್, ಶಾಸಕರಾದ ಸಿ.ಎನ್. ಬಾಲಕೃಷ್ಣ, ಅಭಯ್ ಪಾಟೀಲ್, ಮಾಜಿ ಸಚಿವ ಅಭಯ್ ಚಂದ್ರ ಜೈನ್ ಸೇರಿದಂತೆ ಜೈನ ಮಠದ ವಿವಿಧ ಮಠಗಳ ಮಠಾಧೀಶರು ಆಸೀನರಾಗಿದ್ದರು.
10 ಎತ್ತರದ ಶಿಲಾ ಶಾಸನ
ಶ್ರವಣಬೆಳಗೊಳದ ನಿಷಿಧಿ ಬೆಟ್ಟದಲ್ಲಿ ಚಾರುಕೀರ್ತಿಭಟ್ಟಾರಕ ಶ್ರೀಗಳ ನಿಷಿಧಿ ಮಂಟಪ ಹಾಗೂ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ 6 ಅಡಿ ಅಗಲ, 10 ಅಡಿ ಎತ್ತರದ ಶಿಲಾ ಶಾಸನವನ್ನು ಲೋಕಾರ್ಪಣೆ ಮಾಡಲಾಯಿತು.
ಕವಿತೆ ಹೇಳಿದ ವೀರಪ್ಪ ಮೊಯ್ಲಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಾತನಾಡಿ, ಅತ್ಯಧಿಕ ಶಿಲಾಶಾಸನ ಇರುವ ಕ್ಷೇತ್ರ ಅಂದರೆ ಅದು ಶ್ರವಣಬೆಳಗೊಳ. ಅದರ ಜತೆಗೆ ಇದೀಗ ಚಾರುಕೀರ್ತಿ ಶ್ರೀಗಳ ಚರಿತ್ರೆ ಸಾರುವ ಇನ್ನೊಂದು ಶಿಲಾಶಾಸನ ಅನಾವರಣ ಮಾಡಿರುವುದು ಐತಿಹಾಸಿಕವಾಗಿ ಉಳಿಯಲಿದೆ. ನಾನು ಹೆಚ್ಚಿಗೆ ಮಾತನಾಡಲು ಹೋಗುವುದಿಲ್ಲ. ನನ್ನ ನೆಚ್ಚಿನ ಗುರುಗಳ ಕುರಿತು ನಾನು ಬರೆದಿರುವ ಕವಿತೆಯನ್ನು ಹೇಳುತ್ತೇನೆ ಎಂದು ಹೇಳಿ ಶ್ರೀಗಳ ಕುರಿತ ಕವಿತೆ ವಾಚಿಸಿದರು.