ಶೀಘ್ರದಲ್ಲೇ ನೀರೆತ್ತುವ ಪಂಪ್ ದುರಸ್ತಿ

10rajesh7
Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕು ಹಾಗು ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಕೆರೆಹಳ್ಳಿ ಕೆರೆಯ ಬಳಿ ಇರುವ ಮೋಟರ್ ಪಂಪ್ ದುರಸ್ತಿಯಲ್ಲಿದ್ದು, ಶೀಘ್ರದಲ್ಲೇ ಪಂಪ್ ದುರಸ್ತಿ ಪಡಿಸಿ, ಕೆರೆಗಳಿಗೆ ನೀರು ತುಂಬಿಸಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.

ತಾಲೂಕಿನ ಕೆರೆಹಳ್ಳಿ ಕೆರೆ ಗ್ರಾಮದ ಸಮೀಪದಲ್ಲಿರುವ ಪಂಪ್‌ಹೌಸ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.ಕೆರೆಹಳ್ಳಿ ಕೆರೆ ಭರ್ತಿಯಾಗಿದ್ದು, ಅಲ್ಲಿಂದ ತಮ್ಮಡಹಳ್ಳಿ ಕೆರೆಗೆ ನೀರೆತ್ತುವ ಮೋಟರ್ ದುರಸ್ತಿಯಾಗಿದೆ. ಈ ಕಾರಣಕ್ಕೆ ಮುಂದಿನ ಕೆರೆಗಳಿಗೆ ನೀರು ಹರಿಸುವುದು ಕಷ್ಟವಾಗಿದೆ. ಈ ಸಂಬಂಧ ಈಗಾಗಲೇ ನೀರಾವರಿ ನಿಗಮದ ಅಧಿಕಾರಿಗಳು ತುರ್ತು ಕ್ರಮ ವಹಿಸಿ, ಮೋಟರ್‌ಗಳನ್ನು ಲಿಪ್ಟ್ ಮಾಡಿದ್ದಾರೆ. ಭಾರಿ ಗಾತ್ರದ ಮೋಟರ್‌ಗಳನ್ನು ಲಿಪ್ಟ್ ಮಾಡಲು 5 ದಿನ ತೆಗೆದುಕೊಂಡಿದೆ ಎಂದು ತಿಳಿಸಿದರು.

ನೀರೆತ್ತುವ ಮೋಟರ್‌ಗಳನ್ನು ಪುಣೆಯ ಕಂಪನಿಯೊಂದು ವಿನ್ಯಾಸ ಮಾಡಿದೆ. ಅವರ ಸಲಹೆ, ಮಾರ್ಗದರ್ಶನದಂತೆ ಮೋಟರ್ ಮೇಲೆತ್ತಿ ಪರಿಶೀಲನೆ ನಡೆಸಿ ಮೈಸೂರಿನಲ್ಲಿ ಸೂಕ್ತವಾದ ಕಂಪನಿಗೆ ಕಳುಹಿಸಿಕೊಡಲಾಗಿದೆ. ಈ ಎಲ್ಲಾ ಪ್ರಕ್ರಿಯೆ ಬಹಳ ವೇಗವಾಗಿ ನಡೆಯುತ್ತಿದೆ. ದುರಸ್ತಿಯಾಗುತ್ತಿದ್ದಂತೆ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆ ನಿರಂತರವಾಗಿರುತ್ತದೆ ಎಂದು ಹೇಳಿದರು.

ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಹಾಗು ಶಾಸಕರ ನಿರಾಸಕ್ತಿ ಎಂದು ಪ್ರತಿಭಟನೆ ಮಾಡುವುದು ಸರಿಯಾದ ಮಾರ್ಗವಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಪಂಪ್‌ಗಳ ದುರಸ್ತಿಯಾಗುತ್ತಿರುವುದು ನೈಜ ಕಾರಣವಾಗಿದೆ. ಅದು ಬಿಟ್ಟು ಸರ್ಕಾರ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಕೆರೆಗಳಿಗೆ ನೀರು ತುಂಬಿಸಲು ಶಾಸಕರು ನಿರಾಸಕ್ತಿ ಎಂಬ ತಪ್ಪು ಹೇಳಿಕೆಯನ್ನು ನೀಡುತ್ತಿರುವುದು ಸರಿಯಲ್ಲ. ಇನ್ನು ಹದಿನೈದು ದಿನಗಳಲ್ಲಿ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ಮುಖಂಡರಾದ ಗುರುಬಸಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜಕುಮಾರ್, ಮುಖಂಡರಾದ ಸಿದ್ದರಾಜನಾಯಕ, ಕೆರೆಹಳ್ಳಿ ರಾಜೇಂದ್ರಕುಮಾರ್, ಶಂಕರ್ ನಾಗರಾಜಪ್ಪ, ನಾಗರಾಜಯ್ಯ, ಶಿವಣ್ಣ, ಚಿನ್ನಪ್ಪ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net