ಶೀಘ್ರದಲ್ಲೇ ನಿವೇಶನ ಹಂಚಿಕೆ : ಡಿಸಿ ಯಶವಂತ್ ವಿ.ಗುರುಕರ್ ಮಾಹಿತಿ

CPT
Published on

ಚನ್ನಪಟ್ಟಣ : ಸರ್ಕಾರ ನಗರಾಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುವ ಜತೆಗೆ, ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮವಹಿಸಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸದಸ್ಯರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.
ನಗರದ ನಗರಸಭಾ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರದ ಅರ್ಹ ಪಲಾನುಭವಿಗಳಿಗೆ ನಿವೇಶನ ನೀಡಲು ಈಗಾಗಲೇ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಪಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಶಿಪಾರಸ್ಸು ಹಾಗೂ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಆರ್ಹ ಫಲಾನುಭವಿಗಳಿಗೆ ನಿವೇಶನ ಹಂಚುವ ಸಲುವಾಗಿ ಈಗಾಗಲೇ ಹಲವು ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ. ನಿವೇಶನ ಹಂಚಿಕೆಗೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ನಗರದ ಅಭಿವೃದ್ಧಿಗೂ ಸರ್ಕಾರ ಅನುದಾನ ನೀಡಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.

ಕೆಲ ಸದಸ್ಯರ ಅಸಮಾಧಾನ! : ನಿವೇಶನ ಹಂಚಿಕೆ ವಿಚಾರ ಪ್ರಸ್ತಾಪಗೊಳ್ಳುತ್ತಿದ್ದಂತೆ ಸಭೆಯಲ್ಲಿ ಪರ ಹಾಗೂ ವಿರೋಧದ ಚರ್ಚೆ ಆರಂಭಗೊಂಡಿತು. ಬಿಜೆಪಿ ಹಾಗೂ ಕೆಲ ಜೆಡಿಎಸ್ ಸದಸ್ಯರು, ಇಷ್ಟೊಂದು ತರಾತುರಿಯಲ್ಲಿ ನಿವೇಶನ ಹಂಚಿಕೆ ನಿರ್ಧಾರ ಏಕೆ? ಐಡಿಎಂಸಿ ಬಡಾವಣೆಯಲ್ಲಿ ಸಾಕಷ್ಟು ಒತ್ತುವರಿಯಾಗಿದೆ. ಅದನ್ನು ಬದಿಗಿಟ್ಟು, ಕೇವಲ ಅರ್ಧ ಜಾಗವನ್ನು ವಿತರಿಸುವ ಆತುರವೇಕೆ? ಪಲಾನುಭವಿಗಳ ಆಯ್ಕೆ ವಿಚಾರದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂದು ಜೆಡಿಎಸ್ ಸದಸ್ಯ ಮಂಜುನಾಥ್, ಬಿಜೆಪಿ ಸದಸ್ಯರಾದ ಕೋಟೆ ಚಂದ್ರು, ಜಯಾಮಾಲಾ ಸೇರಿ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಅಂತಿಮವಾಗಿ ಬಡವರಿಗೆ ನಿವೇಶನ ಹಂಚುವುದಾದರೆ ನಮ್ಮ ಒಪ್ಪಿಗೆ ಇದೆ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

ಅನುದಾನಕ್ಕೂ ವಿರೋಧ!: ಡಿಸಿಎಂ ಮನವಿ ಮೇರೆಗೆ ಎಸ್‌ಎಫ್‌ಸಿ ಅನುದಾನದಡಿಯಲ್ಲಿ ನಗರದ ಪ್ರತಿ ವಾರ್ಡ್‌ಗಳಿಗೂ ತಲಾ 1 ಕೋಟಿ ರೂ.ನಂತೆ ಒಟ್ಟು 31 ಕೋಟಿ ರೂ. ಬಿಡುಗಡೆಯಾಗಿದೆ. ಇದರ ಕ್ರೀಯಾ ಯೋಜನೆಗೆ ಸದಸ್ಯರು ಅನುಮೋದನೆ ನೀಡಬೇಕು ಎನ್ನುತ್ತಿದಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ನಗರಸಭಾ ಸದಸ್ಯರ ಗಮನಕ್ಕೆ ತಾರದಂತೆ ಕ್ರೀಯಾ ಯೋಜನೆ ರೂಪಿಸಲಾಗಿದೆ. ಇದರ ಬದಲು ಬೇರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಈ ಮನವಿಯನ್ನು ನಯವಾಗಿ ತಿರಸ್ಕರಿಸಿದ ಜಿಲ್ಲಾಧಿಕಾರಿಗಳು, ಡಿಸಿಎಂ ಆದೇಶದ ಮೇರೆಗೆ ನಿಗದಿ ಪಡಿಸಿದ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲು ಸೂಚಿಸಿದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ನಗರದ ಕಸದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ನಿರ್ವಹಣೆ, ಕಳಪೆ ಕಾಮಗಾರಿಗಳು ಹಾಗೂ ಅಕ್ರಮ ಖಾತೆ ಬಗ್ಗೆ ಸದಸ್ಯರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಎಲ್ಲವನ್ನೂ ಶಾಂತಚಿತ್ತವಾಗಿ ಆಲಿಸಿದ ಜಿಲ್ಲಾಧಿಕಾರಿಗಳು, ನಗರಸಭೆಗೆ ಪೌರಾಯುಕ್ತರು ಹೊಸದಾಗಿ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಭರವಸೆ ನೀಡಿದರು. ಹೊಸ ಬೋರ್‌ವೆಲ್, ಪೈಪ್ ಲೈನ್ ಕಾಮಗಾರಿಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸದಸ್ಯರಾದ ಕೋಟೆ ಚಂದ್ರು, ಲಿಯಾಕತ್ ಖಾನ್, ಎಂ.ಜೆ.ರೇವಣ್ಣ, ಮಂಗಳಮ್ಮ, ನಾಗೇಶ್, ಲೋಕೇಶ್, ಶ್ರೀನಿವಾಸಮೂರ್ತಿ, ಮಹದೇವ, ರಫೀಕ್, ಸುಮಾ ರವೀಶ್, ಜಯಮಾಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net