

ಚಿಕ್ಕಬಳ್ಳಾಪುರ: ತ್ವರಿಗತಿಯಲ್ಲಿ ಹಾಲು ಒಕ್ಕೂಟದ ಮಾದರಿಯಲ್ಲಿ ಜಿಲ್ಲೆಯಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕಾರ್ಯಾರಂಭಿಸಲಿದೆ ಎಂದು ಸಚಿವ ಸುಧಾಕರ್ ಭರವಸೆ ನೀಡಿದರು.
ತಾಲೂಕಿನ ಪೆರೇಸಂದ್ರದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕೋಲಾರದಿಂದ ಚಿಕ್ಕಬಳ್ಳಾಪುರ ಪ್ರತ್ಯೇಕಗೊಂಡು ನೂತನ ಜಿಲ್ಲೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಅಸ್ತಿತ್ವಕ್ಕೆ ತರಲು ಹೋರಾಟ ನಡೆಸಲಾಗಿತ್ತು. ಆ ಶ್ರಮಕ್ಕೆ ತಕ್ಕ ಫಲ ಈಗ ಲಭಿಸಿದೆ ಎಂದರು.
ಜಿಲ್ಲೆಯ ರೈತರು ಮತ್ತು ಸಹಕಾರಿಗಳ ಒಗ್ಗಟ್ಟಿನ ಬೇಡಿಕೆ ಈಡೇರಿಕೆ ಸಂತಸದಾಯಕ. ಜಿಲ್ಲೆಯು
ಹೆಚ್ಚಿಗೆ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಉಪ ಕಸುಬಾಗಿ ಹೈನುಗಾರಿಕೆಯನ್ನು ಆವಲಂಬಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕನಸಿನಂತೆ ರೈತರ ಸರ್ವತೋಮುಖ ಅಭಿವೃದ್ಧಿಗೆ ಹೈನುಗಾರಿಕೆ ಪೂರಕವಾಗಿದ್ದು, ಇದಕ್ಕೆ ಅಗತ್ಯವಿರುವ ಉತ್ತೇಜನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿವೆ ಎಂದರು.
ಹಾಲು ಹಾಗೂ ಹೈನು ಕೋಲಾರಕ್ಕಿಂತ ಚಿಕ್ಕಬಳ್ಳಾಪುರದಲ್ಲೇ ಹೆಚ್ಚು ಉತ್ಪಾದನೆಯಾಗುತ್ತಿದೆ. ಆದರೆ, ಲಾಭದಲ್ಲಿ ಮಾತ್ರ ಈ ಭಾಗವು ಮಲತಾಯಿಧೋರಣೆ ಅನುಭವಿಸುತ್ತಲೇ ಇತ್ತು. ಇದರ ನಡುವೆ ಪ್ರತ್ಯೇಕ ಒಕ್ಕೂಟ ರಚನೆಯಾದರೆ ಕೋಲಾರ ಒಕ್ಕೂಟಕ್ಕೆ ಲಾಭಾಂಶದಲ್ಲಿ ಕಡಿಮೆಯಾಗಲಿದೆ ಎಂಬ ಉದ್ದೇಶದಿಂದಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಹಿರಿಯ ರಾಜಕಾರಣಿಯೊಬ್ಬರು ವೈಯಕ್ತಿಕ ಹಿತಾಸಕ್ತಿ ಕಾರಣಕ್ಕೆ ತಡೆಯೊಡ್ಡುತ್ತಲೇ ಬಂದಿದ್ದರು ಎಂದು ಕಿಡಿಕಾರಿದರು.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್‌ಪಿ ವಾಸುದೇವ್, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಪಿ.ಎನ್.ಚೆನ್ನಕೃಷ್ಣಾರೆಡ್ಡಿ ಮತ್ತಿತರರು ಇದ್ದರು.
ನಿರ್ದೇಶಕರ ಸಂಖ್ಯೆ ಹೆಚ್ಚಳ
ಕೋಚಿಮುಲ್ ಪ್ರತ್ಯೇಕವಾಗಿ ಚಿಮುಲ್ ಸ್ಥಾಪನೆಯಾಗಿರುವುದರಿಂದ ಸಂಸ್ಥೆಯ ಆಸ್ತಿ ಸೇರಿ ನಿರ್ದೇಶಕರ ಸಂಖ್ಯೆಯಲ್ಲಿಯೂ ಬದಲಾವಣೆ ಆಗಲಿವೆ. ನಿಯಮಾನುಸಾರ ಈ ಸ್ಥಾನಗಳು ಚಿಮುಲ್‌ನಲ್ಲಿ ಹೆಚ್ಚಳವಾಗಲಿದೆ. ವಿಭಜನೆ ಪ್ರಕ್ರಿಯೆ ಮತ್ತು ಸಿಬ್ಬಂದಿ ನೇಮಕದ ಬಳಿಕ ಚಿಮುಲ್‌ಗೆ ಚುನಾವಣೆ ನಡೆಯಲಿದೆ. ಪ್ರತ್ಯೇಕ ಒಕ್ಕೂಟದ ನೂತನ ಆಡಳಿತ ಮಂಡಲಿ ಅಧಿಕಾರಕ್ಕೆ ಬರಲಿದೆ ಎಂದು ಸಚಿವರು ಹೇಳಿದರು. ಇನ್ನು ಡಿಸಿಸಿ ಬ್ಯಾಂಕ್ ಪ್ರತ್ಯೇಕವಾಗಲು ಆರ್‌ಬಿಐ ಒಪ್ಪಿಗೆ ಅಗತ್ಯವಿದೆ. ಶೀಘ್ರವೇ ಈ ಬೇಡಿಕೆಯನ್ನು ಸರ್ಕಾರ ಈಡೇರಿಸುವ ವಿಶ್ವಾಸವಿದೆ ಎಂದರು.
ಪೆರೇಸಂದ್ರ ಠಾಣೆಗೆ ಶಿಲಾನ್ಯಾಸ
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.