ಶೀಘ್ರದಲ್ಲೇ ಚಿಕ್ಕಮಗಳೂರು-ಬೇಲೂರು ರೈಲು ಓಡಾಟ:ಸಚಿವ ವಿ. ಸೋಮಣ್ಣ ಭರವಸೆ

ಶೀಘ್ರದಲ್ಲೇ ಚಿಕ್ಕಮಗಳೂರು-ಬೇಲೂರು ರೈಲು ಓಡಾಟ:ಸಚಿವ ವಿ. ಸೋಮಣ್ಣ ಭರವಸೆ
Published on

ಹಾಸನ: ಚಿಕ್ಕಮಗಳೂರು- ಬೇಲೂರು ರೈಲು ಮಾರ್ಗ ಯೋಜನೆಗೆ 498 ಎಕರೆ ಭೂಮಿ ಅವಶ್ಯಕತೆ ಇದ್ದು, ಈಗಾಗಲೇ 11/1 ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆ ವತಿಯಿಂದ ಮುಂದಿನ ಕಾಮಗಾರಿ ಆರಂಭಿಸಿ ಇನ್ನೊಂದು ವರ್ಷದಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವುದಾಗಿ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನೈಋತ್ಯ ರೈಲ್ವೆ ಮತ್ತು ನಿರ್ಮಾಣ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತದೊಂದಿಗೆ ಚಿಕ್ಕಮಗಳೂರು-ಬೇಲೂರು ಹೊಸ ರೈಲು ಮಾರ್ಗದ ಪ್ರಗತಿ ಪರಿಶೀಲನೆಯ ವಿಷಯವಾಗಿ ಸಭೆ ನಡೆಸಿದ ಸಚಿವರು, ಜಿಲ್ಲಾಧಿಕಾರಿಗಳು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಭೂ ಸ್ವಾಧೀನ ಮಾಡಿಕೊಟ್ಟರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿ ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಚಿಕ್ಕಮಗಳೂರು- ಬೇಲೂರು ಮಾರ್ಗಕ್ಕೆ ಅವಶ್ಯವಿರುವ 498 ಎಕರೆ ಭೂಮಿಯನ್ನು ಆದಷ್ಟು ಶೀಘ್ರದಲ್ಲಿಯೇ ಸ್ವಾಧೀನಕ್ಕೆ ಪಡೆದುಕೊಡಬೇಕು ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ಈಗಾಗಲೇ ಈ ಮಾರ್ಗದ ಭೂಮಿಯ 11/1 ಆಗಿದ್ದು, ರೈಲ್ವೆ ಇಲಾಖೆ ಅಧಿಕಾರಿಗಳು ಡಿಪಿಆರ್ ಸಿದ್ಧ ಮಾಡಿಕೊಳ್ಳಬಹುದು. ಇನ್ನು ಬೇಲೂರಿನಿಂದ ಬಿಕ್ಕೋಡು ಮಾರ್ಗವಾಗಿ ಆಲೂರಿನವರೆಗೆ ಭೂ ಸ್ವಾಧೀನವನ್ನು ಶೀಘ್ರದಲ್ಲಿಯೇ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಇದು ಮಾಜಿ ಪ್ರಧಾನಿಗಳ ಜಿಲ್ಲೆ. 1996ರಲ್ಲಿ ಈ ಮಾರ್ಗದ ಯೋಜನೆ ಆರಂಭವಾಗಿ ನಂತರ ನನೆಗುದಿಗೆ ಬಿದ್ದಿತು. ಇದೀಗ ನನ್ನ ಅವಧಿಯಲ್ಲಿ ರಾಜ್ಯದಲ್ಲಿ ನಿಂತಿರುವ ಹಳೇ ಯೋಜನೆಗಳಿಗೆ ಮರುಜೀವ ಕೊಡುವ ಕೆಲಸ ಮಾಡುತ್ತಿದ್ದೇನೆ. ಈ ಮಾರ್ಗದಲ್ಲಿ ಒಂದೇ ಭಾರತ್ ರೈಲಿನ ಜತೆಗೆ ಮೊಮೊ ರೈಲುಗಳನ್ನು ತರುವ ವ್ಯವಸ್ಥೆ ಮಾಡಲಾಗುವುದು. ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಇನ್ನೊಂದು ರೈಲು ಬಿಡುವ ಚಿಂತನೆ ಕೂಡ ಇದೆ. ಹಾಗೆಯೇ ಚಿತ್ರದುರ್ಗ- ದಾವಣಗೆರೆ-ತುಮಕೂರು ಮಾರ್ಗದ ರೈಲ್ವೆ ಯೋಜನೆಗೆ ಈಗಾಗಲೇ ಮೊದಲ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರ 5 ರೂಪಾಯಿ ಕೂಡ ಕೊಟ್ಟಿಲ್ಲ
ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಹಳೇ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು 11 ಸಾವಿರ ಕೋಟಿ ವೆಚ್ಚ ಆಗಲಿದೆ. ಈ ಎಲ್ಲ ಯೋಜನೆಗಳು 50:50 ಅನುದಾನದಲ್ಲಿ ನಡೆಯಬೇಕಿದ್ದವು. ಅಂದರೆ ರಾಜ್ಯ ಸರ್ಕಾರ ಅರ್ಧ ಹಣ ಕೇಂದ್ರ ಸರ್ಕಾರ ಅರ್ಧ ಹಣ ನೀಡುವುದು. ಆದರೆ, ರಾಜ್ಯ ಸರ್ಕಾರದಿಂದ ಈವರೆಗೂ 5 ರೂಪಾಯಿ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದಲೇ ಈ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇಡೀ ರಾಜ್ಯದ 57 ರೈಲ್ವೆ ನಿಲ್ದಾಣಗಳನ್ನು ಅಮೃತ್ ಯೋಜನೆಯಡಿ ಮೇಲ್ದರ್ಜೆಗೇರಿಸುವ ಕೆಲಸ ಮಾಡಲಾಗುವುದು. ಪ್ರಯಾಣಿಗರು ರೈಲ್ವೆ ನಿಲ್ದಾನದಲ್ಲಿ ತಂಗಲು ರೂಮುಗಳಿಂದ ಹಿಡಿದು ಪ್ರತಿಯೊಂದು ವ್ಯವಸ್ಥೆ ಮಾಡಿ ತ್ರಿ ಸ್ಟಾರ್ ಹೋಟೆಲ್‌ನಂತೆ ಮಾಡಲಾಗುವುದು. ಹಾಗೆಯೇ ಹಾಸನ ನಗರದ ರೈಲ್ವೆ ನಿಲ್ದಾಣ ಸೇರಿದಂತೆ ಹೊಳೆನರಸೀಪುರ, ಸಕಲೇಶಪುರ, ಅರಸೀಕೆರೆ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಶ್ರೇಯಸ್‌ಗೆ ಬುದ್ಧಿ ಮಾತು
ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಶ್ರೇಯಸ್ ಪಟೇಲ್ ಹೊಳೆನರಸೀಪುರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಬಗ್ಗೆ ಅಧಿಕಾರಿಗಳಿಗೆ ಇಂಗ್ಲಿಷ್‌ನಲ್ಲಿ ವಿವರಿಸಲು ಮುಂದಾದಾಗ ವಿ. ಸೋಮಣ್ಣ ಅವರು, ‘ನೀನು ಇನ್ನು ಚಿಕ್ಕವನಿದೆಯಾ. ನನ್ನ ಜತೆ 20 ದಿನ ಇರು. ನಿನಗೆ ಎಲ್ಲವನ್ನು ಹೇಳಿಕೊಡುತ್ತೇನೆ. ನಾನು ರಾಜಕೀಯದಲ್ಲಿ ಸಾಕಷ್ಟು ಸೈಕಲ್ ಹೊಡೆದಿದ್ದೇನೆ. ನೀನು ಕೇವಲ ಹೊಳೆನರಸೀಪುರಕ್ಕೆ ಮಾತ್ರ ಸೀಮಿತವಾಗಬಾರದು. ಉಳಿದ ತಾಲೂಕುಗಳ ಕಡೆಗೂ ಗಮನ ಕೊಡಬೇಕು.’ ಎಂದು ಆತ್ಮೀಯತೆಯಿಂದ ಬುದ್ಧಿಮಾತು ಹೇಳಿದರು.
ಹಿಂದಿ ಕಲಿಯುತ್ತಿದ್ದೇನೆ
ನಾನು ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಹಿಂದಿ ಭಾಷೆ ಹೇರಿಕೆ ವಿರುದ್ಧ ಪ್ರತಿಭಟನೆ ಮಾಡಿ 20 ದಿನ ಜೈಲು ಸೇರಿದ್ದೆ. ಈಗ ಹಿಂದಿ ಭಾಷೆ ಕಲಿಯಲೇಬೇಕಿದೆ. ಅದಕ್ಕಾಗಿ ನಾನು ಒಬ್ಬರನ್ನು ನೇಮಿಸಿಕೊಂಡು ಹಿಂದಿ ಕಲಿಯುತ್ತಿದ್ದೇನೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕ ಎಚ್.ಕೆ. ಸುರೇಶ್, ರೈಲ್ವೆ ಇಲಾಖೆ ಆರ್‌ಜಿಎಂ ಶಿಲ್ಪಾ ಅಗರ್ವಾಲ್, ಸಿಎಒ ರಾಮಗೋಪಾಲ್, ಪಿಸಿಸಿಎಂ ಎಸ್ ಪಿ ಶಾಸ್ತ್ರಿ, ಡಿಎಫ್‌ಒ ಸೌರಭ್ ಕುಮಾರ್, ಸಹಾಯಕ ವಿಭಾಗಾಧಿಕಾರಿಗಳಾದ ಮಾರುತಿ, ಶ್ರುತಿ, ತಹಸೀಲ್ದಾರ್‌ಗಳಾದ ಮಮತಾ, ನಂದಕುಮಾರ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಫ್ಲೈಓವರ್ ಪರಿಶೀಲನೆ
ಸಭೆಯ ಬಳಿಕ ಸಚಿವ ವಿ. ಸೋಮಣ್ಣ ನಗರದ ಎನ್.ಆರ್. ವೃತ್ತದಿಂದ ಕೋರ್ಟ್‌ವರೆಗೆ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಒಂದು ಮಾರ್ಗ ಸಂಚಾರಕ್ಕೆ ಮುಕ್ತವಾಗಿದ್ದು, ಮತ್ತೊಂದು ಮಾರ್ಗದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net