ಶೀಘ್ರದಲ್ಲೇ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ

20ss1masika sabe
ಶನಿವಾರಸಂತೆ ಗ್ರಾಪಂ ಮಾಸಿಕ ಸಭೆ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಅಧ್ಯಕ್ಷತೆಯಲ್ಲಿ ನಡೆಯಿತು.
Published on

ಶನಿವಾರಸಂತೆ: ಪಟ್ಟಣದಲ್ಲಿ ಹಲವು ವರ್ಷಗಳಿಂದ ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.

ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮಾಸಿಕ ಸಭೆಯಲ್ಲಿ ಕಸ ವಿಲೇವಾರಿಗಾಗಿ ಗೊತ್ತು ಮಾಡಿರುವ ಜಾಗದಲ್ಲಿ ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ಹಂತದಲ್ಲಿದ್ದು, ಕಾಮಗಾರಿ ಮುಗಿದ ಕೂಡಲೇ ಅಲ್ಲೇ ಕಸ ವಿಲೇವಾರಿ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ತ್ಯಾಜ್ಯ ವಿಲೇವಾರಿಗಾಗಿ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರನನ್ನು ಸಭೆಗೆ ಕರೆಸಿ, ಒಣ ಹಾಗೂ ಹಸಿ ತ್ಯಾಜ್ಯವನ್ನು ಪ್ರತೇಕವಾಗಿ ವಿಲೇವಾರಿ ಮಾಡುವಂತೆ ಗ್ರಾಪಂ ಸದಸ್ಯರು ಮತ್ತು ಪಿಡಿಒ ಸೂಚಿಸಿದರು.

ಗ್ರಾಪಂಗೆ ಸೇರಿದ ಜಾಗವನ್ನು ಐದಾರು ವರ್ಷಗಳು ಹಿಂದೆ ವ್ಯಕ್ತಿಯೊಬ್ಬರು ಅಧಿಕಾರಿಗಳ ನೆರವಿನಿಂದ ವಾಣಿಜ್ಯ ಉದ್ದೇಶಿತ ಭೂ ಪರಿವರ್ತನೆ ಮಾಡಿಕೊಂಡಿದ್ದರು. ಕಳೆದ 2 ವರ್ಷಗಳ ಹಿಂದೆ ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಾಣಕ್ಕಾಗಿ ಗ್ರಾಪಂ ಪರವಾನಿಗೆ ನೀಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಸ್.ಎನ್.ರಘು, ಸರ್ದಾರ್ ಆಹಮ್ಮದ್, ಆದಿತ್ಯಗೌಡ, ಗ್ರಾಪಂಗೆ ಸೇರಿದ ಜಾಗದಲ್ಲಿ ಬಡವರಿಗೆ ನಿವೇಶನ, ಅಂಗನವಾಡಿ ಕಟ್ಟಡ ಮುಂತಾದವುಗಳಿಗೆ ಮೀಸಲಿರುವ ಜಾಗ ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಾಣಕ್ಕಾಗಿ ಪರವಾನಿಗೆ ನೀಡಿರುವ ಮಾಹಿತಿಯನ್ನು ತಡವಾಗಿ ನೀಡಿದ್ದೀರಾ ಎಂದು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡು ಸಭೆಯಿಂದ ಎದ್ದು ಹೊರಗಡೆ ನಡೆದರು.

ಬಳಿಕ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಮನವೊಲಿಸಿ ಸಭೆಗೆ ಕರೆದುಕೊಂಡು ಬಂದರು. ನಂತರ ಸಭೆಯಲ್ಲಿ ವಾಣಿಜ್ಯ ಉದ್ದೇಶಿತ ಕಟ್ಟಡಕ್ಕಾಗಿ ಈ ಹಿಂದೆ ನೀಡಿದ್ದ ಪರವಾನಿಗೆ ರದ್ದುಗೊಳಿಸುವಂತೆ ತೀರ್ಮಾನಿಸಲಾಯಿತು.

ಪಟ್ಟಣದ ಅಭಿವೃದ್ಧಿಯ ಹಿತದೃಷ್ಟಿಯಿಂದ ಇನ್ನು ಮುಂದೆ ಗ್ರಾಪಂ ಆಡಳಿತ ಮಂಡಳಿ ಸಭೆಯನ್ನು ಪ್ರತಿ ತಿಂಗಳ ಮೊದಲ ವಾರದಲ್ಲಿ ನಡೆಸುವುದು ಮತ್ತು ಪ್ರತಿ ತಿಂಗಳು ತುರ್ತು ಸಭೆಯನ್ನು ನಡೆಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಾರ್ವಜನಿಕರ ಅರ್ಜಿ ಅಹವಾಲುಗಳನ್ನು ವಿಲೇವಾರಿ ಮಾಡಲಾಯಿತು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಎಸ್.ಆರ್.ಮಧು, ಎಸ್.ಸಿ.ಶರತ್‌ಶೇಖರ್, ಗೀತಾ ಹರೀಶ್, ಸರೋಜಾ ಶೇಖರ್, ಕಾವೇರಿ, ಸರಸ್ವತಿ, ಪಿಡಿಒ ಮೇದಪ್ಪ, ಕಾರ್ಯದರ್ಶಿ ದೇವರಾಜ್, ಲೆಕ್ಕಾಧಿಕಾರಿ ಲೀಲಾ, ಗ್ರಾಪಂ ಸಿಬ್ಬಂದಿ ಪೌಜಿಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net