

ಚನ್ನರಾಯಪಟ್ಟಣ: ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಶೀಘ್ರದಲ್ಲಿಯೇ ಪಟ್ಟಣದಲ್ಲಿ ಎರಡು ಕಡೆ ನಮ್ಮ ಕ್ಲೀನಿಕ್ ಘಟಕಗಳನ್ನು ಆರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್ ವತಿಯಿಂದ 2022-23ನೇ ಸಾಲಿನ ಸಿಎಸ್‌ಆರ್ ಆಕ್ಷಿವಿಟಿ ಕಾರ್ಯಕ್ರಮದಡಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವ ತುರ್ತುವಾಹನ(ಅಂಬುಲೇನ್ಸ್) ಸೇವೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ನಮ್ಮ ಕ್ಲೀನಿಕ್ ಆರಂಭವಾದಲ್ಲಿ ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒತ್ತಡ ಕಡಿಮೆಯಾಗಲಿದೆ. ಡಿ.ಕಾಳೇನಹಳ್ಳಿ ರಸ್ತೆ ಹಾಗೂ ಅರಳೀಪೇಟೆ ಸರ್ಕಲ್‌ನಲ್ಲಿ ನಮ್ಮ ಕ್ಲೀನಿಕ್ ಆರಂಭಿಸಲಾಗುವುದು ಎಂದರು.
ಈಗಾಗಲೇ ಉತ್ತಮವಾದ ಕಟ್ಟಡಗಳನ್ನು ಗುರ್ತಿಸಲಾಗಿದೆ. ಇದರೊಂದಿಗೆ ನಗರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕಾಗಿ ಬಿ.ಎಂ.ರಸ್ತೆಯಲ್ಲಿ ಕೋರ್ಟ್ ಸಮೀಪದ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಇನ್ನೂ ತಾಯಿ-ಮಗು ಆಸ್ಪತ್ರೆ ಪ್ರಾರಂಭಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಆರೋಗ್ಯ ಇಲಾಖೆ ಕೆಲ ದಾಖಲಾತಿ ಮತ್ತು ಸ್ಪಷ್ಟನೆ ಕೇಳಿದೆ. ಅವುಗಳನ್ನು ಪೂರೈಸಲಾಗಿದೆ. ಶೀಘ್ರದಲ್ಲಿಯೇ ತಾಯಿ-ಮಗು ಆಸ್ಪತ್ರೆ ಸೌಲಭ್ಯ ಸಿಗಲಿದೆ ಎಂದು ಭರವಸೆ ನೀಡಿದರು.
ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಮತ್ತು ಹಿರಿಸಾವೆ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ದುರಸ್ತಿಗೆ ಮನವಿ ಮಾಡಲಾಗಿದೆ. ಇನ್ನೂ ಬಾಗೂರು ಹೊರತುಪಡಿಸಿ ಎಲ್ಲ ಹೋಬಳಿಗಳಲ್ಲಿಯೂ 108 ಅಂಬುಲೇನ್ಸ್ ಸೇವೆ ಲಭ್ಯವಿದ್ದು ಪಟ್ಟಣದ ವ್ಯಾಪ್ತಿಯಲ್ಲಿದ್ದ ತುರ್ತು ವಾಹನವನ್ನು ದುರಸ್ತಿಗೊಳಿಸಿ ಶೀಘ್ರ ಭಾಗೂರು ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮಾತನಾಡಿ, ಪೆಟ್ರೋನೆಟ್ ಸಂಸ್ಥೆಯು ನೀಡಿರುವ ಅಂಬುಲೇನ್ಸ್ 25 ಲಕ್ಷ ವೆಚ್ಚದಾಗಿದ್ದು ವೆಂಟಿಲೇಟರ್, ವೀಲ್‌ಚೇರ್, ಆಕ್ಸಿಜೆನ್ ಘಟಕ, ಕಂಪ್ಯೂಟರ್ ಮಾನಿಟರಿಂಗ್ ಸಿಸ್ಟ್‌ಂ ಹಾಗೂ ಬಯೋ ವೇಸ್ಟ್ ಮ್ಯಾನೇಜಿಂಗ್ ಸಿಸ್ಟ್‌ಂ ಒಳಗೊಂಡ ಮಿನಿ ಐಸಿಯು ರೀತಿಯಲ್ಲಿ ಸುಸಜ್ಜೀತಗೊಳಿಸಲಾಗಿದೆ ಎಂದರು.
ಪುರಸಭಾ ಅಧ್ಯಕ್ಷೆ ರಾಧಾ ಮಂಜುನಾಥ್, ವೈದ್ಯೆ ಡಾ.ಹೊಯ್ಸಳ, ಆರೋಗ್ಯ ಸಮಿತಿ ಸದಸ್ಯ ಮೆಡಿಕಲ್ ವೆಂಕಟೇಶ್, ಎಕ್ಸ್‌ರೇ ಟೆಕ್ನಿಷಿಯನ್ ಗುರುಮೂರ್ತಿ ಹಾಗೂ ಇತರರು ಇದ್ದರು.