

ಬೆಳಗಾವಿ: ದೇಶದ ವಿವಿಧೆಡೆಯಿಂದ ಪ್ರತಿವರ್ಷ ನಾಲ್ಕೈದು ಲಕ್ಷ ಪ್ರವಾಸಿಗರು ಭೇಟಿ ನೀಡುವ ಆಕರ್ಷಕ ಪ್ರವಾಸಿ ತಾಣವಾಗಿರುವ ಗೋಕಾಕ ಜಲಪಾತದ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋಕಾಕ ಜಲಪಾತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದರ ಜತೆ ವೀಕ್ಷಕರಿಗಾಗಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡುವುದಕ್ಕಾಗಿ ಚಿಂತನೆ ನಡೆಸಲಾಗಿದೆ. ಪ್ರತಿಬಾರಿ ಜಲಪಾತ ವೀಕ್ಷಿಸಲು ಬಂದಾಗ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅನೇಕರು ಸಾವಿಗೀಡಾಗುವ ಪ್ರಸಂಗಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇಂತಹ ಅನಾಹುತಗಳನ್ನು ತಡೆಗಟ್ಟುವುದಕ್ಕೂ ಕೂಡ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಸರ್ಕಾರ ಕೂಡಲೇ ಗೋಕಾಕ ಜಲಪಾತದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಜರುಗಿಸಲಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.