ಶೀಘ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ

bkt-9-7
ದಿಗ್ವಿಜಯ ಯಾತ್ರೆ ನಿಮಿತ್ತ ಬಾಗಲಕೋಟೆಯ ದುರ್ಗಾ ನಗರ ಕಾಲೋನಿಯ ದುರ್ಗಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಶ್ರೀರಾಘವೇಂದ್ರ ಸ್ವಾಮಿಗಳಮಠದ ಸುಬಧೇಂದ್ರತೀರ್ಥರ ಶ್ರೀಪಾದಂಗಳವರು ಉದ್ಘಾಟಿಸಿದರು.
Published on

ಬಾಗಲಕೋಟೆ: ಪ್ರತಿಯೊಬ್ಬರು ದೇಶ ಪ್ರೇಮ ಮರೆಯಬಾರದು. ಸಾಮಾಜಿಕ ಸೇವೆ ನಿರಂತರವಾಗಿ ಮಾಡಬೇಕು. ಅತ್ಯುತ್ತಮ ನಾಗರಿಕ ಹಾಗೂ ಆರೋಗ್ಯವಂತರಾಗಿ ಬಾಳಬೇಕು ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳಮಠದ ಸುಬಧೇಂದ್ರತೀರ್ಥರ ಶ್ರೀಪಾದಂಗಳವರ ಹೇಳಿದರು.
ದಿಗ್ವಿಜಯ ಯಾತ್ರೆ ನಿಮಿತ್ತ ಬಾಗಲಕೋಟೆಯ ದುರ್ಗಾ ನಗರ ಕಾಲೋನಿಯ ದುರ್ಗಾ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು, ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ನಾವೆಲ್ಲ ಶ್ರಮಿಸಬೇಕು. ಶೀಘ್ರದಲ್ಲಿ ಸುಕ್ಷೇತ್ರ ಮಂತ್ರಾಲಯದಲ್ಲಿ ಶ್ರೀಮಠದ ವತಿಯಿಂದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲಾಗುವುದು. ಡೊನೆಷನ್ ಪಡೆದುಕೊಳ್ಳುವದಿಲ್ಲ ಎಂದು ಘೋಷಣೆ ಮಾಡಿದರು.
ಈಗಾಗಲೇ ಬಳ್ಳಾರಿ ಸೇರಿ ಕೆಲವು ಕಡೆಗಳಲ್ಲಿ ಆಸ್ಪತ್ರೆ ತೆರೆಯಲಾಗಿದ್ದು, ಮಂತ್ರಾಲಯದಲ್ಲಿ ಯಾರಿಂದಲೂ ದೇಣಿಗೆ ಪಡೆಯದೇ ಶ್ರೀರಾಯರ ಮಠದಿಂದಲೇ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲಾಗುವುದು. ಆ ಭಾಗದಲ್ಲಿ ಜನರಿಗೆ ಹೆಚ್ಚಿನ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಮಂತ್ರಾಲಯ ಮಠದಿಂದ ವಿವಿಧ ಸ್ಥಳಗಳಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಬಡವರ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲಾಗಿದೆ. ಅನೇಕ ಕಡೆ ಅಂಬುಲೆನ್ಸ್ ನೀಡಲಾಗಿದೆ. ಪ್ರತಿಯೊಬ್ಬರಲ್ಲಿ ಧರ್ಮ ಶ್ರದ್ಧೆ ಇರಬೇಕು ಎಂದು ಹೇಳಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ೧೭೦ ಜನ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಶಿಬಿರದಲ್ಲಿ ಡಾ. ಗಿರಿಶ ಮಾಸೂರಕರ, ಡಾ.ಪ್ರಮೋದ ಮಿರ್ಜಿ, ಡಾ.ಎಚ್.ಆರ್.ಕಟ್ಟಿ, ಡಾ.ದೇವರಾಜ ಪಾಟೀಲ, ಡಾ.ನಾರಾಯಣ ಮುತಾಲಿ, ಡಾ.ಸಮೀರ ಕುಲಕರ್ಣಿ, ಡಾ.ಸಹನಾ ರಾವ, ಡಾ.ಶ್ರವಣ ಮಾಸೂರಕರ, ಡಾ.ರವೀಂದ್ರ ಕುಲಕರ್ಣಿ, ಡಾ.ಜಯತೀರ್ಥ ದೇಶಪಾಂಡೆ, ಡಾ.ಅಕ್ಷಯ ದೇಶಪಾಂಡೆ, ಡಾ.ಕೃತಿಕಾ ಪಾಟೀಲ, ಡಾ.ಸಂದೀಪ ಹಯೀಲಗೋಳ, ಡಾ. ರಾಜೇಂದ್ರ ಜೋಶಿ ಚಿಕಿತ್ಸೆ ನೀಡಿದರು. ಎಸ್.ಕೆ. ಕುಲಕರ್ಣಿ, ರಾಘು ಗುಮಾಸ್ತೆ ಮತ್ತು ಗೋಪಾಲ ಜಂಬಗಿ, ಕೆ.ಎಸ್.ದೇಶಪಾಂಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net