

ಕಳಸ: ಶೀಘ್ರದಲ್ಲಿ ತಾಲೂಕು ಕಚೇರಿ ಕಟ್ಟಡ ನಿರ್ಮಾಣವಾಗಲಿದ್ದು, ಹಂತ ಹಂತವಾಗಿ ಎಲ್ಲ ಇಲಾಖೆಗಳ ಕಚೇರಿಗಳೂ ಇಲ್ಲಿ ತೆರೆಯಲಿದ್ದು ಜನರಿಗೆ ಸೇವೆ ದೊರಕಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ತಾಲೂಕಿನ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ, ಶಾಸಕರ ಕಚೇರಿಯಲ್ಲಿ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಕಳಸದಿಂದ ಮೂಡಿಗೆರೆ ಸಾಕಷ್ಟು ದೂರದಲ್ಲಿರುವ ಕಾರಣ ಇಲಾಖೆಗಳಿಂದ ಸಿಗುವ ಸವಲತ್ತುಗಳನ್ನು ಕಳಸದಲ್ಲಿ ವಿತರಿಸಲಾಗುತ್ತದೆ ಎಂದರು.
ಕಳಸ ತಾಲೂಕಿನ ಗಂಗಾಮೂಲ-ಕೊಟ್ಟಿಗೆಹಾರ ರಸ್ತೆ ವಿವಿಧ ಅನುದಾನದಡಿ ಒಟ್ಟು 13 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಕಳಸದಲ್ಲಿ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಯಡಿ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಹೊರನಾಡು-ಮಣ್ಣಿನಪಾಲ್ ರಸ್ತೆಯಿಂದ ಬಸರಿಕಟ್ಟೆ ಸೇರುವ ರಸ್ತೆಗೆ ಮೂರು ಕೋಟಿ ರೂ. ವಕಾಮಗಾರಿ, ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳರಪಾಲು ರಸ್ತೆಗೆ 75 ಲಕ್ಷ ಮೊತ್ತದ ಕಾಮಗಾರಿ, ಮಹಲ್ಗೋಡು ಬಳಿ 3 ಕೋಟಿ ವೆಚ್ಚದ ಸೇತುವೆ ಮರು ನಿರ್ಮಾಣ ಹಾಗೂ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ತಾಲೂಕಿನಲ್ಲಿ ಇನ್ನೂ ಹಲವಾರು ರಸ್ತೆಗಳ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್, ತಾಪಂ ಮಾಜಿ ಸದಸ್ಯರಾದ ರಾಜೇಂದ್ರ ಹಿತ್ಲುಮಕ್ಕಿ, ಮಹಮ್ಮದ್ ರಫೀಕ್, ಕಳಸ ಗ್ರಾಪಂ ಸದಸ್ಯ ವೀರೇಂದ್ರ ಜೈನ್, ಮುಖಂಡರಾದ ಕೆ.ಸಿ.ಮಹೇಶ್, ಗಣೇಶ್ ಭಟ್, ಸ್ಟೀಪನ್, ಪ್ರೇಮಾ, ರಾಮಚಂದ್ರ ಹೆಬ್ಬಾರ್ ಇತರರಿದ್ದರು.